IND vs ENG 2nd T20: ಬೆಂಚ್ ಗೆ ಸೀಮಿತವಾಗುತ್ತಾರಾ ವಿರಾಟ್..?
ವಿರಾಟ್ ಕೊಹ್ಲಿ, ಜಸ್ ಪ್ರಿತ್ ಬುಮ್ರಾ, ರಿಷಬ್ ಪಂತ್, ರವೀಂದ್ರ ಜಡೇಜಾ, ಶ್ರೇಯಸ್ ಅಯ್ಯರ್ ಟೆಸ್ಟ್ ತಂಡದಲ್ಲಿದ್ದ ಕಾರಣ ಮೊದಲ ಟಿ 20 ಪಂದ್ಯದಿಂದ ದೂರವಿದ್ದರು. ಆದ್ರೆ ಈಗ ಈ ಎಲ್ಲರೂ ತಂಡಕ್ಕೆ ಲಭ್ಯವಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುವ ಎರಡನೇ ಮ್ಯಾಚ್ ನಲ್ಲಿ ಕೆಲವು ಬದಲಾವಣೆಗಳು ಆಗುವುದು ಖಾಯಂ. ಆಟಗಾರರು ಬದಲಾದ್ರೂ ಮೊದಲ ಪಂದ್ಯದಲ್ಲಿ ತೋರಿದ ಪ್ರದರ್ಶನವನ್ನೇ ತೋರಿ ಸರಣಿ ವಶ ಪಡಿಸಿಕೊಳ್ಳಲು ರೋಹಿತ್ ಶರ್ಮಾ ಬಳಗ ಪ್ಲಾನ್ ಮಾಡುತ್ತಿದೆ. ಬಲಿಷ್ಠ ಬ್ಯಾಟಿಂಗ್ ಲೈನಪ್ ಇದ್ದರೂ ಮೊದಲ ಪಂದ್ಯದಲ್ಲಿ ಸೋತ ಇಂಗ್ಲೆಂಡ್ ಇಂದಿನ ಪಂದ್ಯದಲ್ಲಿ ಹೇಗೆ ರಿಯಾಕ್ಟ್ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಾಗಿದೆ.
ಇನ್ನು ಟೀಂ ಇಂಡಿಯಾದಲ್ಲಿ ಪ್ರಮುಖವಾಗಿ ನಾಲ್ಕು ಬದಲಾವಣೆಗಳು ಆಗುವ ಸಾಧ್ಯತೆಗಳಿವೆ.
ಅದರಲ್ಲಿ ಮುಖ್ಯವಾಗಿ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ನಲ್ಲಿ ವಿರಾಟ್ ಕೊಹ್ಲಿಗೆ ಸ್ಥಾನ ಸಿಗುತ್ತಾ.? ಈ ಹಿಂದೆ ಇಂತಹ ಪ್ರಶ್ನೆ ಬಗ್ಗೆ ಯಾರೂ ಕೂಡ ಯೋಚನೆ ಮಾಡಿರಲಿಲ್ಲ.ಆದ್ರೆ ಕೆಲವು ವರ್ಷಗಳಿಂದ ಎಲ್ಲ ಬದಲಾಗಿದೆ. ಟಿ 20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಟ್ರ್ಯಾಕ್ ರೆಕಾರ್ಡ್ ಈಗಲೂ ಉತ್ತಮವಾಗಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಹಿರಿಯರಿಗೆ ವಿಶ್ರಾಂತಿ ನೀಡಿದಾಗ ಯುವ ಆಟಗಾರರು ಟೀಂ ಇಂಡಿಯಾದ ಪರ ಅಬ್ಬರಿಸಿದ್ದಾರೆ. ಇದು ವಿರಾಟ್ ಕೊಹ್ಲಿ ಸ್ಥಾನವನ್ನು ಪ್ರಶ್ನೆಸುವಂತೆ ಮಾಡಿದೆ.

ಅಂದಹಾಗೆ ವಿರಾಟ್ ಕೊಹ್ಲಿಯಂತಹ ಆಟಗಾರನ ಸಾಮರ್ಥ್ಯವನ್ನು ಯಾರೂ ಪ್ರಶ್ನಿಸುವ ಸ್ಥಿತಿಯಲ್ಲಿಲ್ಲ. ಆದ್ರೆ ಮುಂಬರುವ ವಿಂಡೀಸ್ ಸರಣಿಯಿಂದ ವಿರಾಟ್ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಟಿ 20 ವಿಶ್ವಕಪ್ ದೃಷ್ಠಿಯಲ್ಲಿಟ್ಟುಕೊಂಡು ಇಂಗ್ಲೆಂಡ್ ವಿರುದ್ಧದ ಎರಡು ಟಿ 20 ಪಂದ್ಯಗಳಲ್ಲಿ ಮಿಂಚಲೇಬೇಕಾಗಿದೆ. ಕಳೆದ ಪಂದ್ಯದ ಲೆಕ್ಕಾಚಾರಗಳನ್ನು ನೋಡಿದ್ರೆ ವಿರಾಟ್ ಕೊಹ್ಲಿ ಆರಂಭಿಕ ಇಶಾನ್ ಕಿಶನ್ ಸ್ಥಾನದಲ್ಲಿ ಬರಬಹುದು. ಇಲ್ಲ ಅಂದ್ರೆ ಸ್ಥಿರ ಪ್ರದರ್ಶನ ನೀಡುತ್ತಿರುವ ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಇಬ್ಬರಲ್ಲಿ ಒಬ್ಬರಿಗೆ ಕೋಕ್ ನೀಡುತ್ತಾರಾ ನೋಡಬೇಕಾಗಿದೆ.
ಆದ್ರೆ ಇದು ಅಸಾಧ್ಯವಾದದ್ದು, ಯಾಕಂದರೇ ದೀಪಕ್ ಹೂಡಾ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಾಗಿನಿಂದಲೂ ಅತ್ಯದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಐರ್ಲೆಂಡ್ ವಿರುದ್ಧ ಅವರು ಸಿಡಿಸಿದ ಶತಕ ಅವರ ಸಾಮರ್ಥ್ಯ ಎಂಥಹದ್ದು ಎಂಬುದನ್ನ ಸಾರಿ ಹೇಳಿದೆ. ಅಲ್ಲದೆ ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲೂ ಹೂಡಾ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಜೊತೆಗೆ ಸೂರ್ಯ ಕುಮಾರ್ ಯಾದವ್ ಕೂಡ ಒಳ್ಳೆಯ ಟಚ್ ನಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಒಳ್ಳೆಯ ಇನ್ನಿಂಗ್ಸ್ ಕಟ್ಟಿದ್ದರು. ಟಿ 20 ವಿಶ್ವಕಪ್ ದೃಷ್ಠಿಯಿಂದ ಸೂರ್ಯ ತಂಡದಲ್ಲಿರೋದು ಅನಿವಾರ್ಯವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳಬೇಕಾದರೇ ಇಶಾನ್ ಕಿಶನ್ ಹೊರಗುಳಿಯಬೇಕಾಗುತ್ತದೆ. ಆದ್ರೆ ಇದು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.