ಹ್ಯಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ (Asian Games 2023) ಭಾರತೀಯ ಆಟಗಾರರು 9ನೇ ದಿನವೂ ಪದಕ ಬೇಟೆ ಆರಂಭಿಸಿದೆ. ಭಾರತೀಯ ಆಟಗಾರರು ಈ ಬಾರಿ ಎಲ್ಲ ವಿಭಾಗದಲ್ಲಿಯೂ ಪದಕ ಗೆಲ್ಲುತ್ತಿರುವುದು ವಿಶೇಷವಾಗಿದೆ.
ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್ ನಲ್ಲಿ ಭಾರತದ ಅಥ್ಲಿಟ್ ಪಾರುಲ್ ಚೌಧರಿ (Parul Chaudhary) ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪ್ರೀತಿ ಲಾಂಬಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೇಬಲ್ ಟೆನ್ನಿಸ್ ಮಹಿಳೆಯರ ಡಬಲ್ಸ್ ಸೆಮಿ ಫೈನಲ್ನಲ್ಲಿ ಸುತೀರ್ಥ ಮುಖರ್ಜಿ-ಆಯ್ಹಿಕಾ ಮುಖರ್ಜಿ ಜೋಡಿ ಸೋತು ನಿರಾಸೆ ಮೂಡಿಸಿದಂತಾಗಿದೆ.
ಇನ್ನೊಂದೆಡೆ ಭಾರತ ಪುರುಷರ ಹಾಕಿ ತಂಡ (Mend Hockey Team) ಕೊನೆಯ ಪೂಲ್ ಎ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 12-0 ಅಂತರದಲ್ಲಿ ಭರ್ಜರಿ ಜಯಗಳಿಸಿ, ಸೆಮಿಫೈನಲ್ ಗೆ ಲಗ್ಗೆಯಿಟ್ಟಿದೆ. ಈಗಾಗಲೇ ಒಟ್ಟು 261 ಪದಕಗಳನ್ನು (142 ಚಿನ್ನ, 79 ಬೆಳ್ಳಿ, 40 ಕಂಚು) ಗೆದ್ದಿರುವ ಚೀನಾ ಆರಂಭದಿಂದಲೂ ಮೊದಲ ಸ್ಥಾನದಲ್ಲಿಯೇ ಉಳಿದಿದೆ. 121 ಪದಕಗಳನ್ನು (32 ಚಿನ್ನ, 44 ಬೆಳ್ಳಿ, 45 ಕಂಚು) ಗೆದ್ದಿರುವ ಜಪಾನ್ 2ನೇ ಸ್ಥಾನದಲ್ಲಿದೆ. ರಿಪಬ್ಲಿಕ್ ಕೊರಿಯಾ 132 ಪದಕಗಳನ್ನ (31 ಚಿನ್ನ, 39 ಬೆಳ್ಳಿ, 62 ಕಂಚು) ಗೆದ್ದು 3ನೇ ಸ್ಥಾನದಲ್ಲಿದೆ. 13 ಚಿನ್ನ, 22 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 58 ಪದಕಗಳನ್ನು ಗಳಿಸಿರುವ ಭಾರತ ತಂಡ ನಾಲ್ಕನೇ ಸ್ಥಾನದಲ್ಲಿದೆ. ಕ್ರೀಡಾಕೂಟಕ್ಕೆ ಇನ್ನೂ 6 ದಿನ ಬಾಕಿಯಿದ್ದು, ಇನ್ನು ಹೆಚ್ಚಿನ ಪದಕ ಭಾರತದ ಬುಟ್ಟಿಗೆ ಬೀಳುವ ಸಾಧ್ಯತೆ ಇದೆ.