ಕೊರೊನಾ ಸಂಕಷ್ಟ – ಏಪ್ರಿಲ್ ತಿಂಗಳಲ್ಲಿ ಕೆಲಸ ಕಳೆದುಕೊಂಡವರೆಷ್ಟು ಗೊತ್ತಾ..?
ನವದೆಹಲಿ : ದೇಶದಲ್ಲಿ ಕಳೆದ ವರ್ಷ ಕಾಣಿಸಿಕೊಂಡ ಕೊರೊನಾ ಮಹಾಮಾರಿಯಿಂದ ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದೆ. ಲಾಕ್ ಡೌನ್ ನಿಂದಾಗಿ ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ. ಲಕ್ಷಾಂತರ ಮಂದಿ ಕೆಲಸಗಳನ್ನ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ರೀತಿ ಕಳೆದ ಏಪ್ರಿಲ್ ಒಂದೇ ತಿಂಗಳಲ್ಲಿ ನಿರುದ್ಯೋಗ ದರ ಶೇ.8ಕ್ಕೆ ಏರಿಕೆಯಾಗಿದೆ. ಕಳೆದ 4 ತಿಂಗಳಲ್ಲೇ ಇದು ಅಧಿಕವಾಗಿದೆ. ಪ್ರೈವೇಟ್ ರಿಸರ್ಚ್ ಸಂಸ್ಥೆ ಸಿಎಂಐಇ ಸೆಂಟರ್ ಫರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಲೆಕ್ಕಾಚಾರದ ಪ್ರಕಾರ ಏಪ್ರಿಲ್ ತಿಂಗಳೊಂದರಲ್ಲೇ 70 ಲಕ್ಷಕ್ಕೂ ಅಧಿಕ ಜನ ಕೆಲಸ ಕಳೆದುಕೊಂಡಿದ್ದು, ನಿರುದ್ಯೋಗ ದರ 7.97 ಪರ್ಸೆಂಟ್ಗೆ ಏರಿಕೆಯಾಗಿದೆ ಅಂತ ತಿಳಿಸಿದೆ.
ಕರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಅಲ್ಲಲ್ಲಿ ಲಾಕ್ಡೌನ್, ಕರ್ಫ್ಯೂ ಹೇರಲಾಗಿದೆ. ಪರಿಣಾಮವಾಗಿ ಕೈಗಾರಿಕೆ, ವ್ಯಾಪಾರ ಚಟುವಟಿಕೆ ಮೇಲೆ ಭಾರಿ ಹೊಡೆತ ಬಿದ್ದಿದ್ದು, ಇದು ಮತ್ತೊಂದು ಹಂತದ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ಭಾರತದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಗರಿಷ್ಠ ಎಂಬಷ್ಟು ಉದ್ಯೋಗ ನಷ್ಟ ಸಂಭವಿಸಿದ್ದು, ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಮಾರ್ಚ್ನಲ್ಲಿ ಶೇ. 6.5ರಷ್ಟಿದ್ದ ನಿರುದ್ಯೋಗ ಪ್ರಮಾಣ ಏಪ್ರಿಲ್ನಲ್ಲಿ ಶೇ. 7.97ಕ್ಕೆ ತಲುಪಿದೆ. ಒಂದೇ ತಿಂಗಳಲ್ಲಿ 70 ಲಕ್ಷಕ್ಕೂ ಅಧಿಕ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಎಂಬ ಖಾಸಗಿ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಕಂಡುಬಂದಿದೆ. ಮೇ ತಿಂಗಳಲ್ಲೂ ನಿರುದ್ಯೋಗ ಸ್ಥಿತಿ ಮತ್ತಷ್ಟು ಜಾಸ್ತಿಯಾಗಬಹುದು ಅಂತ ಕೂಡ ಸಂಸ್ಥೆ ಮಾಹಿತಿ ನೀಡಿದೆ.