ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.
ಭಾರತೀಯ ಆಟಗಾರರು ಭರ್ಜರಿ ಬ್ಯಾಟಿಂಗ್ ನಡೆಸಿ 175 ರನ್ ಗಳ ಮುನ್ನಡೆ ಪಡೆದಿದ್ದಾರೆ. ನಾಳೆ ಕೂಡ ಬ್ಯಾಟಿಂಗ್ ಮುಂದುವರೆಯಲಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ 64.3 ಓವರ್ ಗಳಲ್ಲಿ 246 ರನ್‍ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೊದಲ ದಿನದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತ್ತು. ಎರಡನೇ ದಿನ ಮತ್ತೆ ಬ್ಯಾಟಿಂಗ್ ಮುಂದುವರೆಸಿ 7 ವಿಕೆಟ್ ಕಳೆದುಕೊಂಡು 421 ರನ್ ಗಳಿಸಿದೆ.
ಆರಂಭದಲ್ಲಿಯೇ ಜೈಸ್ವಾಲ್ ಔಟಾದರು. 74 ಎಸೆತಗಳಲ್ಲಿ 80 ರನ್ ಗಳಿಸಿದ್ದ ಯಶಸ್ವಿ ಜೈಸ್ವಾಲ್, ರೂಟ್ ಎಸೆತದಲ್ಲಿ ಕ್ಯಾಚ್ ನೀಡಿದರು. ಶುಭಮನ್ ಗಿಲ್ ಕೂಡಾ 23 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಒಂದಾದ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅರ್ಧಶತಕದ ಜೊತೆಯಾಟವಾಡಿದರು. ಒಂದು ಸಿಕ್ಸರ್ ಸಹಿತ 35 ರನ್ ಗಳಿಸಿದ್ದ ಅಯ್ಯರ್, ದೊಡ್ಡ ಹೊಡೆತಕ್ಕೆ ಕೈ ಹಾಕಿ ರೆಹಾನ್ ಅಹ್ಮದ್ ಎಸೆತದಲ್ಲಿ ಔಟಾದರು. ಕೆ.ಎಸ್. ಭರತ್ ಜೊತೆಗೂಡಿದ ರಾಹುಲ್, ಅರ್ಧಶತಕದ ಜೊತೆಯಾಟ ಪೂರ್ಣಗೊಂಡ ನಂತರ 86 ರನ್ ಗಳಿಸಿದ್ದ ರಾಹುಲ್ ಸಿಕ್ಸರ್ ಸಿಡಿಸಲು ಮುಂದಾಗಿ ಕ್ಯಾಚ್ ನೀಡಿದರು.
ರವೀಂದ್ರ ಜಡೇಜಾ ಜೊತೆಗೂಡಿ ಉತ್ತಮ ಇನ್ನಿಂಗ್ಸ್ ಆಡಿದ ಭರತ್, 41 ರನ್ ಗಳಿಸಿದ್ದಾಗ ರೂಟ್ ಎಸೆತದಲ್ಲಿ ಎಲ್‍ಬಿ ಆದರು. ನಂತರ ಆರ್.ಅಶ್ವಿನ್ ರನೌಟ್ ಆದರು. ಈ ಸಂದರ್ಭದಲ್ಲಿ ಒಂದಾದ ಜಡೇಜಾ ಮತ್ತು ಅಕ್ಷರ್ ಪಟೇಲ್ ಜೊತೆಯಾಟ ಮುಂದುವರೆಸಿ ಉತ್ತಮ ರನ್ ಕಲೆ ಹಾಕಿದರು. ಜಡೇಜಾ 155 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿದ್ದಾರೆ. ಅಕ್ಷರ್ ಪಟೇಲ್ ಅಜೇಯ 35 ರನ್ ಗಳಿಸಿದ್ದಾರೆ. ಈ ಜೋಡಿ 8ನೇ ವಿಕೆಟ್ ಗೆ ಅಜೇಯ 63 ರನ್ ಗಳಿಸಿದ್ದಾರೆ.