ಏಕದಿನ ಸರಣಿ ಸೋಲಿನ ಸೇಡನ್ನು ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ತೀರಿಸಿಕೊಂಡಿದ್ದಾರೆ.
ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ 9 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡಿ, ಆಸೀಸ್ ತಂಡವನ್ನು 142 ರನ್ ಗಳಿಗೆ ಕಟ್ಟಿಹಾಕಿತು. ಭಾರತದ ಬಿಗಿ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿ ಹೋಯಿತು. ಭಾರತದ ಪರ ಟಿಟಾಸ್ ಸಾದು 4 ಓವರ್ ಗಳಲ್ಲಿ 4 ವಿಕೆಟ್ ಪಡೆದ ಸಾಧನೆ ಮಾಡಿದರು.
ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ ಇಬ್ಬರು ಆಟಗಾರರ ಅರ್ಧಶತಕದ ನೆರವಿನಿಂದ 17.4 ಓವರ್ಗಳಲ್ಲಿ ಸುಲಭವಾಗಿ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಪ್ರಮುಖ 4 ವಿಕೆಟ್ಗಳು ಕೇವಲ 33 ರನ್ಗಳಿಗೆ ಔಟ್ ಆದವು. ಹೀಗಾಗಿ ಆಸೀಸ್ ತಂಡ ಆರಂಭದಲ್ಲಿಯೇ ಒತ್ತಡಕ್ಕೆ ಸಿಲುಕಿತು. ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದ ಫೋಬೆ ಲಿಚ್ಫೀಲ್ಡ್ 49 ರನ್ ಗಳಿಸಿದರೆ, ಅಲಿಸ್ಸಾ ಪೆರ್ರಿ 37 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು.








