ನವದೆಹಲಿ: ಬಾಂಗ್ಲಾ ದೇಶ ಹೊತ್ತಿ ಉರಿಯುತ್ತಿದೆ. ಹೀಗಾಗಿ ಭಾರತೀಯ ವಿದ್ಯಾರ್ಥಿಗಳು ಮರಳಿ ದೇಶಕ್ಕೆ ಬರುತ್ತಿದ್ದಾರೆ. ಇಲ್ಲಿಯವರೆಗೆ 998 ಜನ ತಾಯ್ನಾಡಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಢಾಕಾದಲ್ಲಿರುವ ಭಾರತದ ಹೈಕಮಿಷನ್, ಚಿತ್ತಗಾಂಗ್, ರಾಜ್ ಶಾಹಿ, ಸಿಲ್ಹೆಟ್ ಮತ್ತು ಖುಲ್ನಾದಲ್ಲಿನ ಸಹಾಯಕ ಹೈಕಮಿಷನ್ ಗಳು ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ವಾಪಸಾತಿ ಪ್ರಯತ್ನಗಳಿಗೆ ಸಹಾಯ ಮಾಡುತ್ತಿವೆ ಎಂದು ಸಚಿವಾಲಯ ಹೇಳಿದೆ. ಢಾಕಾದಲ್ಲಿರುವ ಭಾರತದ ಹೈಕಮಿಷನ್ ಮತ್ತು ನಮ್ಮ ಸಹಾಯಕ ಹೈಕಮಿಷನ್‌ಗಳು ಬಾಂಗ್ಲಾದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಳಿದಿರುವ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿವೆ ಮತ್ತು ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.
ಭೂ ಬಂದರುಗಳ ಮೂಲಕ ವಾಪಸಾತಿ ಸಮಯದಲ್ಲಿ ಸುರಕ್ಷಿತ ರಸ್ತೆ ಪ್ರಯಾಣಕ್ಕಾಗಿ ಭದ್ರತಾ ಬೆಂಗಾವಲು ವ್ಯವಸ್ಥೆ ಮಾಡಲಾಗಿದೆ. ಢಾಕಾದಲ್ಲಿನ ಹೈ ಕಮಿಷನ್ ಬಾಂಗ್ಲಾದೇಶದ ನಾಗರಿಕ ವಿಮಾನಯಾನ ಅಧಿಕಾರಿಗಳು ಮತ್ತು ವಾಣಿಜ್ಯ ವಿಮಾನಯಾನ ಸಂಸ್ಥೆಗಳೊಂದಿಗೆ ನಿರಂತರ ವಿಮಾನ ಸೇವೆ ಒದಗಿಸುವ ಯತ್ನ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ.
ಸರ್ಕಾರಿ ಉದ್ಯೋಗ ಕೋಟಾಗಳ ವಿರುದ್ಧ ವಿದ್ಯಾರ್ಥಿಗಳು ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಢಾಕಾ ದಲ್ಲಿ ಕರ್ಫ್ಯೂ ಹೇರಲಾಗಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಒಂದೇ ವಾರದಲ್ಲಿ 115 ಜನ ಸಾವನ್ನಪ್ಪಿದ್ದಾರೆ.








