ಹ್ಯಾಂಗ್‌ಝೌ: ಚೀನಾದ ನೆಲದಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಅಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ (Asian Games) 10ನೇ ಅಂದರೆ ಮಂಗಳವಾರವು ಕೂಡ ಭಾರತೀಯರ ಪಾಲಿಗೆ ಸ್ವರ್ಣಮಯವಾಗಿತ್ತು.
ಮಂಗಳವಾರ ಭಾರತೀಯ ಮಹಿಳೆಯರು ಚಿನ್ನದ ಲಕ್ಷ್ಮೀಯರಾಗಿದ್ದಾರೆ. ಅಥ್ಲಿಟ್ ವಿಭಾಗದಲ್ಲಿ ಮಹಿಳೆಯರೇ ಎರಡು ಚಿನ್ನದ ಪದಕಗಳನ್ನು (Gold Medal) ಭಾರತಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಮಹಿಳೆಯರ 5 ಸಾವಿರ ಮೀಟರ್ ಓಟದಲ್ಲಿ ಪಾರುಲ್ ಚೌಧರಿ (Parul Chaudhary) ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಮಹಿಳೆಯರ ಜಾವೆಲಿನ್ ಥ್ರೋ ವಿಭಾಗದಲ್ಲಿ ಅನ್ನು ರಾಣಿ (Annu Rani) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
5 ಸಾವಿರ ಮೀಟರ್ ಓಟದಲ್ಲಿ ಮ್ಯಾಜಿಕ್ ರೀತಿಯಲ್ಲಿ ಓಡಿದ 28 ವರ್ಷದ ಪಾರುಲ್ 15:14:75 ನಿಮಿಷಗಳಲ್ಲಿ ಜಪಾನಿನ ಪ್ರತಿಸ್ಪರ್ಧಿ ರಿರಿಕಾ ಹಿರೋನಾಕಾರನ್ನು ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ. ಇನ್ನು ಅನ್ನು ರಾಣಿ 62.92 ಮೀಟರ್ ಜಾವೆಲಿನ್ ಎಸೆಯುವ ಎಲ್ಲ ದೇಶಗಳ ಆಟಗಾರರಗಿಂತ ದೂರ ಜಾವೆಲಿನ್ ಎಸೆದು, ಚಿನ್ನ ಗಿಟ್ಟಿಸಿಕೊಂಡಿದ್ದಾರೆ.
ಪುರುಷರ 800 ಮೀಟರ್ ಓಟದಲ್ಲಿ ಮೊಹಮ್ಮದ್ ಅಫ್ಜಲ್ ಪುಳಿಕ್ಕಲಕತ್ 1:48:43 ನಿಮಿಷಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದಿದ್ದಾರೆ. ಪಾರುಲ್ 9ನೇ ದಿನದ ಆಟದಲ್ಲಿ ಪಾರುಲ್ ಮಹಿಳೆಯರ 3 ಸಾವಿರ ಮೀ. ಸ್ಟೀಪಲ್ ಚೇಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಕಾಂಟಿನೆಂಟಲ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಪದಕ ಗೆದ್ದಂತಾಗಿದೆ. 400 ಮೀಟರ್ ಹರ್ಡಲ್ಸ್‌ನಲ್ಲಿ 25 ವರ್ಷದ ವಿತ್ಯಾ ರಾಮರಾಜ್ 55.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದಿದ್ದಾರೆ.