ದೇಶದ ರೈಲು ಸಂಚಾರದಲ್ಲಿ ಮಹತ್ವದ ಹೆಜ್ಜೆಯಾಗಿ, ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಹಾಗೂ ಹೊಸ ಮಾರ್ಗವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಅತ್ಯಾಧುನಿಕ ರೈಲು ಕೋಲ್ಕತ್ತಾ – ಗುವಾಹಟಿ ನಡುವಿನ ಮಾರ್ಗದಲ್ಲಿ ಸಂಚರಿಸಲಿದ್ದು, ಈಶಾನ್ಯ ಭಾರತದ ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಈ ವಂದೇ ಭಾರತ್ ಸ್ಲೀಪರ್ ರೈಲು ಗಂಟೆಗೆ 180 ಕಿಲೋಮೀಟರ್ ಗರಿಷ್ಠ ವೇಗ ಹೊಂದಿರುತ್ತದೆ. ದೀರ್ಘ ದೂರ ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲಿನಲ್ಲಿ ಸ್ಲೀಪರ್ ಕೋಚ್‌ಗಳನ್ನು ಒಳಗೊಂಡ ವಿನ್ಯಾಸ ರೂಪಿಸಲಾಗಿದೆ. ರಾತ್ರಿ ಪ್ರಯಾಣಕ್ಕೆ ಸೂಕ್ತವಾಗಿರುವ ಈ ಸೇವೆಯಿಂದ ಪ್ರಯಾಣ ಸಮಯದಲ್ಲಿ ಭಾರೀ ಉಳಿತಾಯವಾಗಲಿದೆ.
ರೈಲಿನ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗಿದ್ದು, ಕವಚ್ (KAVACH) ಸ್ವಯಂಚಾಲಿತ ಸುರಕ್ಷಾ ವ್ಯವಸ್ಥೆ, ತುರ್ತು ಬ್ರೇಕಿಂಗ್ ವ್ಯವಸ್ಥೆ, ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಜೊತೆಗೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳು, ಸುಧಾರಿತ ಶೌಚಾಲಯಗಳು, ಆರಾಮದಾಯಕ ಮಲಗುವ ಆಸನಗಳನ್ನು ಈ ರೈಲು ಹೊಂದಿರುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಈ ವಂದೇ ಭಾರತ್ ಸ್ಲೀಪರ್ ರೈಲಿಗೆ ಹಸಿರು ನಿಶಾನೆ ತೋರಲಿದ್ದು, ನಂತರ ವಾಣಿಜ್ಯ ಸೇವೆ ಆರಂಭವಾಗಲಿದೆ. ಈ ಹೊಸ ರೈಲು ಸೇವೆ ಮೂಲಕ ದೇಶದ ವೇಗದ, ಸುರಕ್ಷಿತ ಹಾಗೂ ಆರಾಮದಾಯಕ ರೈಲು ಸಂಚಾರದ ಕನಸು ಮತ್ತಷ್ಟು ಹತ್ತಿರವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.








