ಜೂನ್ 26 – ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧ ದಿನದ ಮಹತ್ವ ಗೊತ್ತೆ..?
ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ವ್ಯಸನ ಮತ್ತು ಕಳ್ಳಸಾಗಣೆ ವಿರೋಧ ದಿನ’ವನ್ನು ಪ್ರತಿ ವರ್ಷ ಜೂನ್ 26 ರಂದು ಆಚರಿಸಲಾಗುತ್ತದೆ. ಮಾದಕ ವ್ಯಸನ ಮುಕ್ತ ಜಗತ್ತನ್ನು ಸಾಧಿಸಲು ಮತ್ತು ಕ್ರಮ ತೆಗೆದುಕೊಳ್ಳಲು ಈ ದಿನಾಂಕವನ್ನ ಗುರುತಿಸಲಾಗಿದೆ.
ಪ್ರತಿ ವರ್ಷ, ಪ್ರಪಂಚದಾದ್ಯಂತದ ವಿವಿಧ ಸಂಸ್ಥೆಗಳು ಮತ್ತು ಸರ್ಕಾರಗಳು ವಿಶ್ವ ಮಾದಕವಸ್ತು ದಿನವನ್ನು ಆಚರಿಸುತ್ತಿದ್ದು, ಸಮಾಜಕ್ಕೆ ಮಾದಕವಸ್ತುಗಳು ಉಂಟುಮಾಡುವ ಪ್ರಮುಖ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.
ಪ್ರತಿ ವರ್ಷ ‘ಅಂತಾರಾಷ್ಟ್ರೀಯ ಮಾದಕ ದ್ರವ್ಯಗಳ ವ್ಯಸನ ಮತ್ತು ಕಳ್ಳಸಾಗಣೆ ವಿರೋಧಿ ದಿನ’ದಂದು ಇದುವರೆಗೂ ಪೊಲೀಸರು ವಿವಿಧ ಪ್ರಕರಣಗಳಲ್ಲಿ ತಾವು ವಶಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ನಾಶಪಡಿಸಲಿದ್ದಾರೆ. ಈ ಕುರಿತು ಡಿಜಿಪಿ ಕರ್ನಾಟಕ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಮಾದಕ ವಸ್ತುಗಳನ್ನು ಸೇವಿಸುವುದಾಗಲೀ, ಮಾರಾಟ ಮಾಡುವುದಾಗಲೀ ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ 1985 ಪ್ರಕಾರ, ಯಾವುದೇ ಮಾದಕ ವಸ್ತು ಅಥವಾ ಸೈಕೋಟ್ರೋಪಿಕ್ ವಸ್ತುವಿನ ಉತ್ಪಾದನೆ, ಬೆಳೆಯುವುದು, ಮಾರುವುದು, ಖರೀದಿಸುವುದು, ಸಾಗಿಸುವುದು, ಸಂಗ್ರಹಿಸುವುದು ಅಥವಾ ಸೇವಿಸುವುದು ಅಪರಾಧ. ಒಂದು ವೇಳೆ ಈ ಅಪರಾಧಗಳಲ್ಲಿ ಭಾಗಿಯಾದವರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ಕೆಲವೊಂದು ಗಂಭೀರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಯಾರೇ ಅಗಲೀ, ಇಂತಹ ಕೃತ್ಯಗಳಿಂದ ದೂರ ಇರುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಜನರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಯುವ ಜನತೆ ಹೆಚ್ಚಾಗಿ ಈ ಚಟಗಳಿಗೆ ಮುಳುಗಿ ತಮ್ಮ ಜೀವನವನ್ನೇ ಬಲಿ ಕೊಡುತ್ತಿದ್ದಾರೆ.