ಐಪಿಎಲ್ 2020- ಸೆಪ್ಟಂಬರ್ 6ರಂದು ವೇಳಾಪಟ್ಟಿ ಬಿಡುಗಡೆ- ಬ್ರಿಜೇಶ್ ಪಟೇಲ್ ಸ್ಪಷ್ಟನೆ
2020ರ ಯುಎಇ ಐಪಿಎಲ್ ಟೂರ್ನಿಯ ಅಂತಿಮ ವೇಳಾಪಟ್ಟಿಯನ್ನು ಸೆಪ್ಟಂಬರ್ 6ರಂದು ಬಿಡುಗಡೆ ಮಾಡಲಾಗುವುದು ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಐಪಿಎಲ್ ವೇಳಾಪಟ್ಟಿಯನ್ನು ನಾಳೆ ಅಂದ್ರೆ ಸೆಪ್ಟಂಬರ್ 6ರಂದು ಬಿಡುಗಡೆ ಮಾಡಲಿದ್ದೇವೆ ಎಂದು ಐಪಿಎಲ್ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ನಿಯಮದ ಪ್ರಕಾರ ಪ್ರತಿ ಆವೃತ್ತಿಯ ಮೊದಲ ಪಂದ್ಯ ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳ ನಡುವೆ ನಡೆಯುತ್ತದೆ. ಹೀಗಾಗಿ ಸೆಪ್ಟಂಬರ್ 19ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರನ್ನರ್ ಅಪ್ ಆಗಿರುವ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ. ಬಹುತೇಕ ಈ ಬಾರಿಯೂ ಇದೇ ನಿಯಮವನ್ನು ಪಾಲಿಸಬಹುದು.
ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಕಳೆದ ಹದಿನಾಲ್ಕು ದಿನಗಳಿಂದ ಅಭ್ಯಾಸವನ್ನೇ ಶುರು ಮಾಡಿಲ್ಲ. ಸಿಎಸ್‍ಕೆ ತಂಡದ ಇಬ್ಬರು ಆಟಗಾರರು ಸೇರಿದಂತೆ ಒಟ್ಟು 13 ಮಂದಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಹೀಗಾಗಿ ಸಿಎಸ್‍ಕೆ ಆಟಗಾರರು ಕ್ವಾರಂಟೈನ್ ನಲ್ಲಿದ್ದರು. ನಿನ್ನೆಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಆದ್ರೆ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ ದೀಪಕ್ ಚಾಹರ್ ಮತ್ತು ಋತುರಾಜ್ ಗಾಯಕ್ವಾಡ್ ಅವರು ಕ್ವಾರಂಟೈನ್ ನಲ್ಲಿದ್ದು, ಇನ್ನೂ ಕೂಡ ಅವರು ಅಭ್ಯಾಸಕ್ಕೆ ಇಳಿದಿಲ್ಲ.
ಭಾರತದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗಿರುವ ಕಾರಣ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ. ಯುಎಇನಲ್ಲಿ ಕೊವಿಡ್ ಮಾರ್ಗಸೂಚಿಯಂತೆ ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ. ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಈ ಬಾರಿಯ ಐಪಿಎಲ್ ಟೂರ್ನಿ ನಡೆಯಲಿದೆ.