ಚೆನ್ನೈ ಮತ್ತು ರಾಜಸ್ಥಾನ ನಡುವಿನ ಪಂದ್ಯದಲ್ಲಿ ಎಲ್ಲವೂ ಇತ್ತು. ಬೌಂಡರಿಗಳ ಸುರಿಮಳೆ ಆಯಿತು. ಸಿಕ್ಸರ್ಗಳು ಸಿಡಿದವು. ರುತುರಾಜ್ ಶತಕದ ಸಂಭ್ರಮ ನೋಡಲು ಸಿಕ್ಕಿತ್ತು. ರಾಜಸ್ಥಾನದ ಅಬ್ಬರದ ಆರಂಭ, ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್… ಟಿ20 ಆಟಕ್ಕೆ ಏನು ಬೇಕಿತ್ತೋ ಅದೆಲ್ಲವೂ ನೋಡಲು ಸಿಕ್ಕಿತ್ತು. ಒಟ್ಟು 18 ಸಿಕ್ಸರ್ಗಳು ಸಿಡಿದರೆ, ಎರಡೂ ಇನ್ನಿಂಗ್ಸ್ಗಳಿಂದ 33 ಫೋರ್ಗಳು ದಾಖಲಾಗಿದ್ದವು.
ಅಬುಧಾಭಿಯಲ್ಲಿ ಟಾಸ್ಗೆದ್ದ ರಾಜಸ್ಥಾನ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಇಳಿಸಿತು. ಫಾಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಾಡ್ ಎಂದಿನಂತೆ ಉತ್ತಮ ಆರಂಭ ತಂದುಕೊಟ್ಟರು. ಮೊದಲ ವಿಕೆಟ್ಗೆ ಈ ಜೋಡಿ 47 ರನ್ಗಳ ಜೊತೆಯಾಟ ತಂದುಕೊಟ್ಟಿತು. 19 ಎಸೆತಗಳಲ್ಲಿ 25 ರನ್ಗಳಿಸಿದ ಫಾಫ್ ತೆವಾಟಿಯ ಎಸೆತವನ್ನು ಮುನ್ನುಗ್ಗಿ ಬಾರಿಸಲು ಹೋಗಿ ಎಡವಿ ಸ್ಟಂಪ್ ಔಟ್ ಆದರು. ಭಡ್ತಿ ಪಡೆದು ಬಂದ ಸುರೇಶ್ ರೈನಾ ಮತ್ತೆ ವೈಫಲ್ಯ ಅನುಭವಿಸಿ 3 ರನ್ಗಳಿಗೆ ತೆವಾಟಿಯಾಗೆ ವಿಕೆಟ್ ಒಪ್ಪಿಸಿದರು.
ರುತುರಾಜ್ ಗಾಯಕ್ವಾಡ್ ಜೊತೆ ಸೇರಿದ ಮೊಯಿನ್ ಅಲಿ ಉತ್ತಮ ಜೊತೆಯಾಟ ಕಟ್ಟಿದರು. ರುತುರಾಜ್ ಅರ್ಧಶತಕದ ಸಂಭ್ರಮ ಕೂಡ ಆಚರಿಸಿಕೊಂಡರು. ಆದರೆ ಮೊಯಿನ್ ಅಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಸ್ಟಂಪ್ಔಟ್ ಆದರು. ಅಂಬಟಿ ರಾಯಡು ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ರುತುರಾಜ್ ಜೊತೆ ಸೇರಿದ ಜಡೇಜಾ ಉತ್ತಮ ಜೊತೆಯಾಟ ಕಟ್ಟಿದರು. ರುತುರಾಜ್ ಬೌಂಡರಿ, ಸಿಕ್ಸರ್ಗಳ ಮೂಲಕ ಅಬ್ಬರಿಸಿದರು. ಜಡೇಜಾ ಕೂಡ ಸ್ಲಾಗ್ ಓಫವರನ ಎಲ್ಲಾ ಲಾಭ ಪಡೆದುಕೊಂಡು. ಈ ಜೋಡಿ ಅಬ್ಬರದ 55ರನ್ಗಳ ಜೊತೆಯಾಟ ಆಡಿತು. ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಮೂಲಕ ರುತುರಾಜ್ ಶತಕದ ಸಂಭ್ರಮವನ್ನು ಕೂಡ ಆಚರಿಸಿದರು. ಜಡೇಜಾ 15 ಎಸೆತಗಳಲ್ಲಿ ಅಜೇಯ 32 ರನ್ಗಳಿಸಿದರು. 9 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ರುತುರಾಜ್ 60 ಎಸೆತಗಳಲ್ಲಿ ಅಜೇಯ 101ರನ್ಗಳಿಸಿದರು. ನಿಗದಿತ 20 ಓವರುಗಳಲ್ಲಿ ಚೆನ್ನೈ 4 ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು.
ಗುರಿ ಬೆನ್ನಟ್ಟ ಹೊರಟ ರಾಯಲ್ಸ್ಗೆ ಎವಿನ್ ಲೆವಿಸ್ ಮತ್ತು ಯಶಸ್ವಿ ಜೈಸ್ವಾಲ್ ವಿಸ್ಪೋಟಕ ಆರಂಭ ತಂದುಕೊಟ್ಟರು. ಕೇವಲ 24 ಎಸೆತಗಳಲ್ಲಿ 50 ರನ್ಗಳ ಜೊತೆಯಾಟ ಬಂದಿತ್ತು. ಪವರ್ ಪ್ಲೇ- ಮುಗಿಯುವರಷ್ಟರಲ್ಲಿ ರಾಜಸ್ಥಾನ ಮೊತ್ತ80 ರನ್ಗಳಾಗಿತ್ತು. ಲೆವಿಸ್ 12 ಎಸೆತಗಳಲ್ಲಿ 27 ರನ್ಗಳಿಸಿ ಔಟಾದರು. ಸ್ಪೋಟಕ ಆಟ ಆಡಿದ ಜೈಸ್ವಾಲ್ 6 ಫೋರ್, 3 ಸಿಕ್ಸರ್ ನೆರವಿನಿಂದ ಕೇವಲ 21 ಎಸೆತಗಳಲ್ಲಿ 50 ರನ್ಗಳಿಸಿ ಆಸೀಫ್ಗೆ ವಿಕೆಟ್ ಒಪ್ಪಿಸಿದರು.
ಸಂಜುಸ್ಯಾಮ್ಸನ್ ಮತ್ತು ಶಿವಂ ದುಬೆ ಅಬ್ಬರದ ಆಟವನ್ನು ಕೈ ಬಿಡಲಿಲ್ಲ. ಅದರಲ್ಲೂ ದುಬೆ ಸಿಕ್ಸರ್ಗಳ ಮೂಲಕ ಅಟ್ಟಹಾಸ ಮೆರೆದರು. ಚೆನ್ನೈ ಬೌಲರ್ಗಳು ದಿಕ್ಕು ತಪ್ಪಿದರು. ಸ್ಲೋವರ್ ಬಾಲ್ಗಳು ಅಂದುಕೊಂಡ ಜಾಗದಲ್ಲಿ ಬೀಳಲಿಲ್ಲ. ಸ್ಪಿನ್ ಆಗಲೇ ಇಲ್ಲ. ಚೆನ್ನೈ ದಿಕ್ಕು ತಪ್ಪಿತ್ತು. ನೋಡ ನೋಡುತ್ತಿದ್ದಂತೆ ದುಬೆ 31 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು.
ಇನ್ನೇನು ದುಬೆ ಮತ್ತು ಸ್ಯಾಮ್ಸನ್ ರಾಯಲ್ಸ್ ತಂಡವನ್ನು ಗೆಲ್ಲಿಸಿಯೇ ಬಿಟ್ಟರು ಅನ್ನುವ ಹೊತ್ತಿಗೆ ಥಾಕೂರ್ 28 ರನ್ಗಳಿಸಿದ್ದ ಸ್ಯಾಮ್ಸನ್ ವಿಕೆಟ್ ಕಬಳಿಸಿದರು. ಆದರೆ ದುಬೆ ಜೊತೆ ಸೇರಿದ ಗ್ಲೆನ್ ಫಿಲಿಪ್ಸ್ ಗೆಲುವಿಗೆ ಬೇಕಾಗಿದ್ದ ರನ್ ಗಳಿಸಿಕೊಟ್ಟರು. ರಾಯಲ್ಸ್ 19.3 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 7 ವಿಕೆಟ್ಗಳ ಜಯ ಸಾಧಿಸಿದ ರಾಯಲ್ಸ್ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಚೆನ್ನೈ ಸೋತರೂ ಅಗ್ರಸ್ಥಾನದಿಂದ ಕೆಳಗೆ ಇಳಿಯಲಿಲ್ಲ.