ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದ ವಿರಾಟ್ ಕೊಹ್ಲಿ, ಪಂಜಾಬ್ ಕಿಂಗ್ಸ್(ಪಿಬಿಕೆಎಸ್) ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಂಡು ಗಮನ ಸೆಳೆದರು.
ಹಲವು ವರ್ಷಗಳ ಕಾಲ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನಡೆಸಿದ್ದ ಕಿಂಗ್ ಕೊಹ್ಲಿ, 2022ರ ಐಪಿಎಲ್ ಆರಂಭಕ್ಕೂ ಮೊದಲೇ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ಕೊಹ್ಲಿ ಅವರ ಬಳಿಕ ಫಾಫ್ ಡುಪ್ಲೆಸ್ಸಿ ಅವರಿಗೆ ಆರ್ಸಿಬಿ ನಾಯಕನಾಗಿ ತಂಡವನ್ನ ಮುನ್ನಡೆಸುತ್ತಿದ್ದಾರೆ. ಆದರೆ ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡುಪ್ಲೆಸ್ಸಿ ಅವರ ಬದಲಾಗಿ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕನಾಗಿ ಕಾಣಿಸಿಕೊಂಡರು.
ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ಪ್ರಕ್ರಿಯೆಗೆ ಆರ್ಸಿಬಿ ತಂಡದ ಕ್ಯಾಪ್ಟನ್ ಆಗಿ ಎಂದಿನಂತೆ ಫಾಫ್ ಡುಪ್ಲೆಸ್ಸಿ ಮೈದಾನಕ್ಕಿಳಿಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಡುಪ್ಲೆಸ್ಸಿ ಅವರ ಬದಲಾಗಿ ವಿರಾಟ್ ಕೊಹ್ಲಿ, ಬೆಂಗಳೂರು ತಂಡದ ನಾಯಕನಾಗಿ ಮೈದಾನಕ್ಕೆ ಇಳಿಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಹೀಗಾಗಿ ಕೊಹ್ಲಿ ಅವರು ಟಾಸ್ ಪ್ರಕ್ರಿಯೆಗಾಗಿ ಮೈದಾನಕ್ಕಿಳಿದಿದ್ದನ್ನು ಕಂಡು ಮೈದಾನದಲ್ಲಿದ್ದ ಪ್ರೇಕ್ಷಕರು ಹರ್ಷೋದ್ಘಾರ ಹಾಕಿದರು.
ಕಳೆದ ಪಂದ್ಯದ ವೇಳೆ ಫಾಫ್ ಡುಪ್ಲೆಸ್ಸಿ ಅವರು ಗಾಯಗೊಂಡಿದ್ದರ ಪರಿಣಾಮ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡದಲ್ಲಿ ಕಾಣಿಸಿಕೊಂಡರು. ಗಾಯದ ಸಮಸ್ಯೆಯ ಕಾರಣದಿಂದ ಕೇವಲ ಬ್ಯಾಟಿಂಗ್ ಮಾಡಿದ ಡುಪ್ಲೆಸ್ಸಿ, ಫೀಲ್ಡಿಂಗ್ ಮಾಡಲು ಆಗದ ಪರಿಣಾಮ ತಂಡದ ನಾಯಕತ್ವದ ಜವಾಬ್ದಾರಿಯನ್ನ ವಿರಾಟ್ ಕೊಹ್ಲಿ ಅವರಿಗೆ ನೀಡಲಾಗಿತ್ತು.
ಧವನ್ ಬದಲು ಕರನ್:
ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ತಂಡದಲ್ಲೂ ಸಹ ನಾಯಕತ್ವದಲ್ಲಿ ಬದಲಾವಣೆ ಕಂಡು ಬಂತು. ತಂಡದ ನಾಯಕ ಶಿಖರ್ ಧವನ್ ಅವರು ಇಂದಿನ ಪಂದ್ಯದಿಂದ ಹೊರಗುಳಿದಿದ್ದು, ಇವರ ಬದಲಾಗಿ ಇಂಗ್ಲೆಂಡ್ನ ಯುವ ವೇಗದ ಬೌಲರ್ ಸ್ಯಾಮ್ ಕರನ್ ಅವರು ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಾಯಕನಾಗಿ ಪಂಜಾಬ್ ತಂಡವನ್ನ ಮುನ್ನಡೆಸಿದರು.