ಮುಂಬೈ : ಪ್ರಸಕ್ತ ಸಾಲಿನ ಐಪಿಎಲ್ (IPL 2023) ಟೂರ್ನಿಯಲ್ಲಿ ಪ್ಲೇ ಆಫ್ ಹಾದಿ ಕಠಿಣವಾಗಿಸಿಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ.
ಮಂಡಿರಜ್ಜು ಗಾಯಕ್ಕೆ (Hamstring Injury) ತುತ್ತಾಗಿರುವ ಕಾರಣ ತಂಡದ ಸ್ಟಾರ್ ಆಲ್ ರೌಂಡರ್ ಆಟಗಾರ ವಾಷಿಂಗ್ಟನ್ ಸುಂದರ್ (Washington Sundar) ಟೂರ್ನಿಯಿಂದ ಹೊರ ಹೋಗಿದ್ದಾರೆ. ಈ ಕುರಿತು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೈದರಾಬಾದ್ ತಂಡ ಹೇಳಿಕೊಂಡಿದೆ. ಮಂಡಿರಜ್ಜು ಗಾಯದಿಂದಾಗಿ ವಾಷಿಂಗ್ಟನ್ ಸುಂದರ್ ಅವರು 2023ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಅಲ್ಲದೇ, ಆದಷ್ಟು ಬೇಗ ಗುಣಮುಖರಾಗಿ ವಾಷಿ ಎಂದು ಹಾರೈಸಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ವಾಷಿಂಗ್ಟನ್ ಸುಂದರ್ ಅಷ್ಟೊಂದು ಹೇಳಿಕೊಳ್ಳುವಂತಹ ಫಾರ್ಮ್ ಮುಂದುವರೆಸಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಕೊನೆಯ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದ 4 ಓವರ್ ಗಳಿಗೆ 28 ರನ್ ನೀಡಿದ್ದ ವಾಷಿಂಗ್ಟನ್, ಬ್ಯಾಟಿಂಗ್ನಲ್ಲಿ 15 ಎಸೆತಗಳಲ್ಲಿ 24 ರನ್ ಗಳನ್ನು ಸಿಡಿಸಿದ್ದರು. ಇದರ ಹೊರತಾಗಿ ಈ ಪಂದ್ಯವನ್ನು ಹೈದರಾಬಾದ್ ಸೋತಿತ್ತು.
ಈ ಆವೃತ್ತಿಯಲ್ಲಿ 7 ಪಂದ್ಯಗಳಲ್ಲಿ ವಾಷಿಂಗ್ಟನ್ ಸುಂದರ್ 60 ರನ್ ಗಳಿಸಿ, ಕೇವಲ 3 ವಿಕೆಟ್ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ್ದ ಬ್ರಿಯಾನ್ ಲಾರಾ, ವಾಷಿಂಗ್ಟನ್ ಸುಂದರ್ ಅದ್ಭುತ ಆಲ್ರೌಂಡರ್ ಆಗಬೇಕೆಂದು ಫ್ರಾಂಚೈಸಿ ಬಯಸುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದ್ದರು. 7 ಪಂದ್ಯಗಳನ್ನಾಡಿರುವ ಹೈದರಾಬಾದ್ ಕೇವಲ 2 ರಲ್ಲಿ ಮಾತ್ರ ಗೆಲುವು ಸಾಧಿಸಿ 4 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ. ಪ್ಲೆ ಆಫ್ ತಲುಪಬೇಕೆಂದರೂ ಉಳಿದ 7ರಲ್ಲಿ 6 ಪಂದ್ಯಗಳನ್ನಾದರೂ ಗೆಲ್ಲಲೇಬೇಕಿದೆ.