ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್ ಐಟಿ ತಂಡ ಇಬ್ಬರು ಅಧಿಕಾರಿಗಳನ್ನು ಬಂಧಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ನಿಗಮದ ಲೆಕ್ಕಾಧಿಕಾರಿ ಪರಶುರಾಮ್ ಬಂಧಿತ ಅಧಿಕಾರಿಗಳು. ಅಮಾನತುಗೊಂಡಿರುವ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಸಚಿವ ನಾಗೇಂದ್ರ ಅವರಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ.
ಪದ್ಮನಾಭ ಎಸ್ಐಟಿ ಅಧಿಕಾರಿಗಳ ಮುಂದೆ ಸಚಿವರ ಹೆಸರು ಹೇಳಿದರೆ ಬಿ.ನಾಗೇಂದ್ರ ರಾಜೀನಾಮೆ ನೀಡಲೇಬೇಕು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಒಂದು ವೇಳೆ ಎಸ್ ಐಟಿ ಮುಂದೆ ನಿಮ್ಮ ಹೆಸರು ಹೇಳಿದರೆ ರಾಜೀನಾಮೆ ನೀಡುವಂತೆ ಬಿ.ನಾಗೇಂದ್ರ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು 80 ರಿಂದ 85 ಕೋಟಿ ಅನುದಾನ ದುರ್ಬಳಕೆಯಾಗಿದೆ. ಈ ಅವ್ಯವಹಾರದಿಂದ ಮನನೊಂದು ನಿಗಮದ ಅಧೀಕ್ಷಕ ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರ ಮೌಖಿಕ ಆದೇಶದಂತೆ ಅವ್ಯಹಾರ ನಡೆದಿದೆ ಎಂದು ಚಂದ್ರಶೇಖರ ನಮೂದಿಸಿದ್ದರು. ಹೀಗಾಗಿ ಎಸ್ ಐಟಿ ತನಿಖೆ ನಡೆಸುತ್ತಿದೆ. ಇತ್ತ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರು ಸಿಬಿಐ ಪ್ರಾದೇಶಿಕ ಕಚೇರಿಗೆ ದೂರು ನೀಡಿದ್ದಾರೆ.