ಐಸಿಸ್ ಪರ ಪ್ರಚಾರ ಮಾಡುತ್ತಿದ್ದ ವ್ಯಕ್ತಿಯ ಬಂಧನ
ತೆಲಂಗಾಣ: ಐಸಿಸ್ ಭಯೋತ್ಪಾದಕ ಸಂಘಟನೆ ಪರ ಪ್ರಚಾರ ಮಾಡುತ್ತಿದ್ದ ವ್ಯಕ್ತಿಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ
ಫಲಕ್ನುಮಾ ನಿವಾಸಿ ಮೊಹಮ್ಮದ್ ಅಬುಸಾನಿಯನ್ನು ಸಿಸಿಎಸ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಐಪಿ ವಿಳಾಸದ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಕೆಲವು ತಿಂಗಳಿನಿಂದ ಆರೋಪಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಐಸಿಸ್ ಪರ ಸಹಾನುಭೂತಿಯಿದ್ದ ಯುವಕರನ್ನು ಸಂಪರ್ಕಿಸುತ್ತಿದ್ದನು. ಈತನು ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಆರೋಪಿಯು ಹಲವು ಬಾರಿ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ.
ವಿಶ್ವದಾದ್ಯಂತ ಯುವಕರನ್ನು ಜಿಹಾದಿಗಳನ್ನಾಗಿ ಸಿದ್ಧಪಡಿಸುತ್ತಿರುವ ಐಸಿಸ್ ಸದಸ್ಯರೊಂದಿಗೆ ಅಬುಸಾನಿ ನಿರಂತರ ಸಮಾಲೋಚನೆ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಿಹಾದ್ ಕಡೆಗೆ ಆಕರ್ಷಿತರಾಗಲು ವಿಡಿಯೋಗಳನ್ನು ಕಳುಹಿಸುತ್ತಿದ್ದ. ಇದಕ್ಕಾಗಿಯೇ ವಿಶೇಷವಾಗಿ ಅಪ್ಲಿಕೇಶನ್ಗಳನ್ನು ರಚಿಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.