ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಗೆ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2024-25ರ ಮಧ್ಯಂತರ ಆಯವ್ಯಯ ಪತ್ರದಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ನಿರ್ಮಿಸಿರುವ ʻವಿನಾಶಕಾರಿ ಭಾರತʼದ ವಾಸ್ತವ ಬಚ್ಚಿಟ್ಟು ʻವಿಕಸಿತ ಭಾರತʼ ಎಂಬ ಭ್ರಮಾಲೋಕವನ್ನು ದೇಶದ ಜನತೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ ಎಂದು ಗುಡುಗಿದ್ದಾರೆ.
ಮಹಿಳೆಯರು, ಯುವಕರು, ರೈತರು ಹಾಗೂ ಬಡವರನ್ನೊಳಗೊಂಡ ನಾಲ್ಕು ‘ಜಾತಿ’ಗಳ ಅಭಿವೃದ್ದಿಯ ಮೇಲೆ ಪ್ರಧಾನಿ ನಂಬಿಕೆ ಇಟ್ಟಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದನ್ನೆ ʻವಿಕಸಿತ ಭಾರತʼದ ಕನಸು ಎಂದು ಅವರು ಹೇಳಿಕೊಂಡಿದ್ದಾರೆ. 10 ವರ್ಷಗಳ ಆಡಳಿತದಲ್ಲಿ ಕಷ್ಟ, ನಷ್ಟ, ದಮನ, ದೌರ್ಜನ್ಯಕ್ಕೀಡಾಗಿರುವುದು ಇದೇ ಬಡವರು, ಮಹಿಳೆಯರು, ಯುವಕರು ಮತ್ತು ರೈತರು. ಅದು ವಿಕಸಿತ ಭಾರತವಲ್ಲ. ವಿನಾಶಕಾರಿ ಭಾರತ ಎಂದು ವಾಗ್ದಾಳಿ ನಡೆಸಿದ್ದಾರೆ.
47 ಲಕ್ಷ ಕೋಟಿ ರೂ. ಬಜೆಟ್ ಗಾತ್ರ ಇದು. ಕಳೆದ ವರ್ಷ 45 ಲಕ್ಷ ಕೋಟಿ ಗಾತ್ರ ಇತ್ತು. ಈ ವರ್ಷ 2 ಲಕ್ಷ ಕೋಟಿ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಬಜೆಟ್ ಗಾತ್ರ ಶೇ. 5.8 ಹೆಚ್ಚಾಗಿದೆ. 16 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಸದ್ಯ 196 ಲಕ್ಷ ಕೋಟಿ ರೂ. ಸಾಲ ಇದೆ. ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.