ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾಗಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಆಂಡ್ ಟೀಮ್ ನ್ನು ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಜೂನ್ 11ರಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ ರನ್ನು ಬಂಧಿಸಿದ್ದರು. ನಂತರ ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳನ್ನು ಬಂಧಿಸಲಾಗಿತ್ತು. ಇಂದಿಗೆ ದರ್ಶನ್ ಆಂಡ್ ಟೀಮ್ ನ ಎರಡನೇ ಬಾರಿಯ ಪೊಲೀಸ್ ಕಸ್ಟಡಿ ಅಂತ್ಯವಾಗುತ್ತಿದೆ.
ಈಗಾಗಲೇ ಪೊಲೀಸರು ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಸ್ಥಳ ಮಹಜರು ಸೇರಿದಂತೆ ಹಲವಾರು ಸಾಕ್ಷ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.