ರಾಜ್ಯದಲ್ಲಿನ ಜೈಲುಗಳಲ್ಲಿ ನಿಯಮಕ್ಕೂ ಮೀರಿ ಕೈದಿಗಳಿದ್ದು, ಎಲ್ಲ ಜೈಲುಗಳು ರಶ್ ಆಗಿವೆ. ಹೆಚ್ಚಿನ ಕೈದಿಗಳು ತುಂಬುತ್ತಿರುವುದರಿಂದಾಗಿ ಕೈದಿಗಳ ನಡುವೆ ಘರ್ಷಣೆಗಳು ಕೂಡ ಉಂಟಾಗುವಂತಾಗುತ್ತಿದೆ.
ವಿಚಾರಣಾಧೀನ ಮತ್ತು ಸಜಾ ಕೈದಿಗಳೊಂದಿಗೆ ಹೊಸ ಕೈದಿಗಳಿಗೆ ಊಟ, ವಸತಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಪರದಾಟ ನಡೆಸುವಂತಾಗಿದೆ. ಹೊಸ ಕೈದಿಗಳು ಬಂದರೆ ಅವರನ್ನು ಎಲ್ಲಿಡುವುದು ಎಂಬ ಚಿಂತೆ ಸದಾಕಾಲ ಜೈಲಿನ ಅಧಿಕಾರಿಗಳನ್ನು ಕಾಡುತ್ತಿರುತ್ತದೆ.
ರಾಜ್ಯದ ಜೈಲುಗಳು ಸದ್ಯ ಸರಾಸರಿ ಶೇ.112ರಷ್ಟು ಭರ್ತಿಯಾಗಿದ್ದು, 1,816 ಜನ ಕೈದಿಗಳನ್ನು ಕಾರಾಗೃಹಗಳಲ್ಲಿ ಹೆಚ್ಚುವರಿಯಾಗಿ ಇರಿಸಲಾಗಿದೆ. ಕೆಲ ಬಹುತೇಕ ಕೇಂದ್ರ ಕಾರಾಗೃಹಗಳು, ಜಿಲ್ಲಾ ಮತ್ತು ತಾಲೂಕು ಉಪ ಜೈಲುಗಳಲ್ಲಿ ನಾಲೈದು ಪಟ್ಟು ಹೆಚ್ಚು ಕೈದಿಗಳನ್ನು ಬಂಧಿಸಿಡಲಾಗಿದೆ. ಹೀಗಾಗಿ ಮನಃ ಪರಿವರ್ತನೆಗೆ ಕೂಡ ಅಡ್ಡಿಯಾದಂತಾಗುತ್ತಿದೆ.
ಸಾಮರ್ಥ್ಯ ಮಿತಿ ಮೀರಿ ಶೇ.258ರಷ್ಟು ಕೈದಿಗಳನ್ನು ಗದಗ ಜೈಲಿನಲ್ಲಿ ಇಡಲಾಗಿದೆ. ಗೋಕಾಕ್ ತಾಲೂಕು ಕಾರಾಗೃಹದಲ್ಲಿ ಶೇ.207), ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ ಜೈಲಿನಲ್ಲಿ ಶೇ. 174, ಕೋಲಾರ ಜಿಲ್ಲಾ ಕಾರಾಗೃಹದಲ್ಲಿ ಶೇ. 168, ಕೇಂದ್ರ ಕಾರಾಗೃಹಗಳ ಪೈಕಿ ಕಲಬುರಗಿ ಕಾರಾಗೃಹದಲ್ಲಿ ಶೇ. 164ರಷ್ಟು ಕೈದಿಗಳಿದ್ದಾರೆ.








