ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೂಡ ಬಾರತದ ಟಾಪ್ ಆರ್ಡರ್ ವಿಫಲವಾಗಿದ್ದು, ಜೈಸ್ವಾಲ್ ಮಾತ್ರ ಯಶಸ್ವಿಯಾಗಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ (Team India) ಮೊದಲ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 336 ರನ್ ಗಳಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಅಜೇಯ 179 ರನ್ ಕಲೆಹಾಕಿದ್ದರೆ, ಅನುಭವಿ ಆರ್ ಅಶ್ವಿನ್ (R Ashwin) 5 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಶೋಯೆಬ್ ಬಸೀರ್ ಹಾಗೂ ರೆಹಾನ್ ಅಹ್ಮದ್ ತಲಾ 2 ವಿಕೆಟ್ ಪಡೆದರೆ, ಜೇಮ್ಸ್ ಅಂಡರ್ಸನ್, ಟಾಮ್ ಹಾರ್ಟ್ಲಿ ತಲಾ ಒಂದೊಂದು ವಿಕೆಟ್ ಕಬಳಿಸಿದ್ದಾರೆ. ಇಂಡಿಯಾ ಪರ ಆರಂಭಿಕ ಯಶಸ್ವಿ ಜೈಸ್ವಾಲ್ 257 ಎಸೆತಗಳಲ್ಲಿ 17 ಬೌಂಡರಿ ಹಾಗೂ 5 ಸಿಕ್ಸರ್ಗಳ ನೆರವಿನಿಂದ 179 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಆದರೆ ಜೈಸ್ವಾಲ್ ಹೊರತುಪಡಿಸಿ ತಂಡದ ಇತರ ಬ್ಯಾಟ್ಸ್ಮನ್ಗಳು ಉತ್ತಮ ಆರಂಭ ಪಡೆದ ನಂತರವೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ.
ನಾಯಕ ರೋಹಿತ್ ಶರ್ಮಾ 14 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬಂದ ಶುಭ್ಮನ್ ಗಿಲ್ ಕೂಡ 34 ರನ್, ಶ್ರೇಯಸ್ ಅಯ್ಯರ್ 27, ರಜತ್ ಪಾಟಿದಾರ್ 32, ಅಕ್ಷರ್ ಪಟೇಲ್ 27 ರನ್ ಗಳಿಸಿದರು. ಶ್ರೀಕರ್ ಭರತ್ 17 ರನ್ ಗಳಿಸಿದರು. ಏಕಾಂಗಿ ಹೋರಾಟ ನಡೆಸುತ್ತಿರುವ ಜೈಸ್ವಾಲ್ 179 ರನ್ ಕಲೆಹಾಕುವ ಮೂಲಕ 172 ರನ್ಗಳ ತಮ್ಮ ಹಳೆಯ ದಾಖಲೆ ಕೂಡ ಮುರಿದಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 172 ರನ್ ಗಳ ಅತ್ಯಧಿಕ ರನ್ ಗಳಿಸಿದ ಇನ್ನಿಂಗ್ಸ್ ಆಡಿದ್ದಾರು. ಈಗ ಆ ದಾಖಲೆ ಮುರಿದಿದ್ದಾರೆ. ಅವರು ಡಬಲ್ ಸೆಂಚುರಿ ಮಾಡಲಿ ಎಂಬುವುದು ಅಭಿಮಾನಿಗಳ ಆಶಯವಾಗಿದೆ.