ನವದೆಹಲಿ: ಹರಿಯಾಣ ಚುನಾವಣಾ ಫಲಿತಾಂಶ (Haryana Election Results) ಸಮೀಕ್ಷೆಗಳ ಸಮೀಕ್ಷೆಯನ್ನೂ ಹುಸಿಗೊಳಿಸಿದೆ. ಬಿಜೆಪಿಗೆ ಮುಖಭಂಗ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ನಿಜವಾಗಿಯೂ ಮತದಾರ ಮತ್ತೊಮ್ಮೆ ಕಾಂಗ್ರೆಸ್ ಗೆ ಮುಖಭಂಗ ಮಾಡಿದ್ದಾನೆ. ಕಾಂಗ್ರೆಸ್ ಸೋಲುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜಿಲೇಬಿ (Jalebi) ಫುಲ್ ಟ್ರೆಂಡಿಂಗ್ ಆಗುತ್ತಿದೆ.
ಜಿಲೇಬಿ ಟ್ರೆಂಡಿಗ್ (Trending) ಗೆ ಹಲವರು ಹಾಸ್ಯ ಮಾಡುತ್ತಿದ್ದಾರೆ. ಹರಿಯಾಣ ಚುನಾವಣೆಯ ಪ್ರಚಾರ ಭಾಷಣದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul gandhi) ಜಿಲೇಬಿ ಪ್ರಸ್ತಾಪ ಮಾಡಿ ಮಾತನಾಡಿದ್ದರು. ಹರಿಯಾಣದ ಜಿಲೇಬಿ ತುಂಬಾ ರುಚಿಕರ. ಅದನ್ನು ವಿಶ್ವದಾದ್ಯಂತ ರಫ್ತು ಮಾಡಬೇಕು. ಸ್ಥಳೀಯ ಅಂಗಡಿಗಳು ಜಿಲೇಬಿ ಕಾರ್ಖಾನೆಗಳಾಗಿ ಬದಲಾಗಬೇಕು. ಈ ಜಿಲೇಬಿಗಳು ದೇಶ ಮತ್ತು ವಿದೇಶಕ್ಕೆ ಹೋದರೆ 10,000 ರಿಂದ 50,000 ಮಂದಿಗೆ ಉದ್ಯೋಗ ಸಿಗಲಿದೆ ಎಂದಿದ್ದರು.
ಈ ಜಿಲೇಬಿಗಳನ್ನು ಜಪಾನ್ ಮತ್ತು ಅಮೆರಿಕದಂತಹ ವಿವಿಧ ದೇಶಗಳಿಗೆ ರಫ್ತು ಮಾಡಬೇಕು. ಆದರೆ ಮೋದಿ ಅವರು ಅದಾನಿ ಅಂಬಾನಿಗೆ ದೇಶದ ಸಂಪತ್ತು ಹಂಚಿದ್ದರಿಂದ ಜಿಲೇಬಿ ಅಂಗಡಿ ತೆರೆಯಲು ನಿಮಗೆ ಸಾಲ ನೀಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.
ಸಮೀಕ್ಷೆಗಳು ಕಾಂಗ್ರೆಸ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದರಿಂದಾಗಿ ಕಾಂಗ್ರೆಸ್ ನಾಯಕರು ಜಿಲೇಬಿ ತಯಾರಿಸಲು ಆರ್ಡರ್ ನೀಡಿದ್ದರು. ಅಷ್ಟೇ ಅಲ್ಲದೇ ಫಲಿತಾಂಶ ಪ್ರಕಟವಾಗುವ ಮೊದಲೇ ಜಿಲೇಬಿಯನ್ನು ಕಾಂಗ್ರೆಸ್ ಕೆಲ ಕಡೆ ಹಂಚಿಕೊಂಡಿತ್ತು.
ಆದರೆ, ಬೆಳಗ್ಗೆ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಬೆಂಬಲಿಗರು ಜಿಲೇಬಿ ಫೋಟೋ ಹಾಕತೊಡಗಿದ್ದಾರೆ. ಫಲಿತಾಂಶ ಬದಲಾಗುತ್ತಿದ್ದಂತೆ ಬಿಜೆಪಿ ಬೆಂಬಲಿಗರು ಈಗ ಜಿಲೇಬಿ ಫೋಟೋವನ್ನು ಹಾಕಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ಕಾರಣ ಈಗ ಜಿಲೇಬಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ.








