ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಒಳಾಂಗಣದಲ್ಲಿ ಅಧಿಕಾರ ಹಂಚಿಕೆಯ ಕಿಡಿ ಮತ್ತೆ ಹೊತ್ತಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೊಂಚ ಮೌನಕ್ಕೆ ಶರಣಾಗಿದ್ದಾರೆ ಎಂದುಕೊಳ್ಳುವಷ್ಟರಲ್ಲೇ, ಅವರ ಬೆಂಬಲಿಗರು ಮತ್ತು ಪಕ್ಷದ ಇತರೆ ಬಣಗಳು ಬೀದಿಗಿಳಿದು ಪೋಸ್ಟರ್ ಸಮರ ಸಾರುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಕೂಗು ಒಂದೆಡೆಯಾದರೆ, ಇದೀಗ ಉಪಮುಖ್ಯಮಂತ್ರಿ ಸ್ಥಾನದ ಮೇಲೂ ಕಣ್ಣು ಬಿದ್ದಿದೆ. ಡಿಕೆ ಶಿವಕುಮಾರ್ ಅವರಿಗೆ ಸೆಂಡ್ ಆಫ್ ನೀಡಿ, ಆ ಸ್ಥಾನಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ತಂದು ಕೂರಿಸಲಾಗುತ್ತದೆ ಎಂಬ ಸ್ಫೋಟಕ ಚರ್ಚೆಯನ್ನು ಚಾಮರಾಜಪೇಟೆಯ ಪೋಸ್ಟರ್‌ಗಳು ಹುಟ್ಟುಹಾಕಿವೆ.
ಚಾಮರಾಜಪೇಟೆಯಲ್ಲಿ ರಾರಾಜಿಸಿದ ನೆಕ್ಸ್ಟ್ ಡಿಸಿಎಂ ಪೋಸ್ಟರ್
ಚಾಮರಾಜಪೇಟೆ ಕ್ಷೇತ್ರದ ಜೆಜೆ ನಗರದ ಪ್ರಮುಖ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಬ್ಯಾನರ್‌ಗಳು ಈಗ ಕಾಂಗ್ರೆಸ್ ಪಾಳೆಯದಲ್ಲಿ ಸಂಚಲನ ಮೂಡಿಸಿವೆ. ಹೊಸ ವರ್ಷದ ಶುಭಾಶಯ ಕೋರುವ ನೆಪದಲ್ಲಿ ಹಾಕಲಾಗಿರುವ ಈ ಬ್ಯಾನರ್‌ಗಳಲ್ಲಿ, ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಮುಂದಿನ ಡಿಸಿಎಂ ಎಂದು ಸಂಬೋಧಿಸಲಾಗಿದೆ. ಜಮೀರ್ ಬೆಂಬಲಿಗರು ಅತ್ಯುತ್ಸಾಹದಿಂದ ಅಂಟಿಸಿರುವ ಈ ಪೋಸ್ಟರ್‌ಗಳು ಹೈಕಮಾಂಡ್ ಅಂಗಳಕ್ಕೂ ತಲುಪಿದ್ದು, ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿದೆ.
ಡಿಕೆಶಿ ಸಿಎಂ ಆದರೆ ಜಮೀರ್ ಡಿಸಿಎಂ?
ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆಯ ಪ್ರಕಾರ, ಒಂದು ವೇಳೆ ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರೆ, ತೆರವಾಗುವ ಡಿಸಿಎಂ ಸ್ಥಾನ ಯಾರಿಗೆ ಎಂಬ ಪ್ರಶ್ನೆ ಎದ್ದಿದೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರಬಲ ನಾಯಕರಾಗಿರುವ ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಲಾಗುತ್ತದೆ ಎಂಬ ಲೆಕ್ಕಾಚಾರ ಜಮೀರ್ ಪಾಳೆಯದಲ್ಲಿದೆ. ಸಂಪುಟ ಪುನಾರಚನೆ ನಡೆದರೂ ಜಮೀರ್‌ಗೆ ಬಡ್ತಿ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
ಪರಮೇಶ್ವರ್ ಪರ ಮತ್ತೊಂದು ಬಣದ ಬ್ಯಾಟಿಂಗ್
ಇತ್ತ ಜಮೀರ್ ಹೆಸರು ಡಿಸಿಎಂ ಸ್ಥಾನಕ್ಕೆ ಕೇಳಿಬರುತ್ತಿದ್ದಂತೆಯೇ, ಅತ್ತ ದಲಿತ ಸಿಎಂ ಕೂಗು ಕೂಡ ಮುನ್ನೆಲೆಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಬಳಿಕ ಆ ಕುರ್ಚಿಗೆ ಅತಿ ಸೂಕ್ತ ವ್ಯಕ್ತಿ ಡಾ ಜಿ ಪರಮೇಶ್ವರ್ ಮಾತ್ರ ಎಂದು ದಲಿತ ಸಂಘಟನೆಗಳು ಮತ್ತು ಪರಮೇಶ್ವರ್ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ. ಹೀಗಾಗಿ ಸಿಎಂ ಕುರ್ಚಿ ಖಾಲಿಯಾಗುವ ಮುನ್ನವೇ, ಮುಂದಿನ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ದಲಿತ ಹಾಗೂ ಅಲ್ಪಸಂಖ್ಯಾತ ನಾಯಕರ ನಡುವೆ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ.
ಒಟ್ಟಾರೆಯಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಎಲ್ಲವೂ ಸರಿ ಇದ್ದಂತೆ ಕಂಡರೂ, ಒಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಶೀತಲ ಸಮರ ಮಾತ್ರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಸದ್ಯಕ್ಕೆ ಸೈಲೆಂಟ್ ಆಗಿರುವ ಸಿದ್ದರಾಮಯ್ಯ ಮತ್ತು ಡಿಕೆಶಿ ಈ ಪೋಸ್ಟರ್ ಪಾಲಿಟಿಕ್ಸ್‌ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.








