ಸಿಇಟಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳಿಂದ ಜನಿವಾರ ತೆಗೆಸಿದ ಘಟನೆ ರಾಜ್ಯದಲ್ಲಿ ಭಾರಿ ವಿವಾದವನ್ನು ಹುಟ್ಟುಹಾಕಿದ್ದು, ಈ ಬಗ್ಗೆ ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಡಾ. ಸುಬುಧೇಂದ್ರ ತೀರ್ಥರು ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವನ್ನು ಕೇವಲ ವೈಯಕ್ತಿಕ ನಿಲುವಿಗೆ ಸೀಮಿತಗೊಳಿಸದೆ, ಸಾಮಾಜಿಕ ಹಾಗೂ ಧಾರ್ಮಿಕ ಹಕ್ಕುಗಳ ಹರಣ ಎಂದು ಅವರು ಬಣ್ಣಿಸಿದ್ದಾರೆ.
“ಧರ್ಮ ಮತ್ತು ಸಂಪ್ರದಾಯಕ್ಕೆ ಚ್ಯುತಿ”
ಡಾ. ಸುಬುಧೇಂದ್ರ ತೀರ್ಥರು ತಮ್ಮ ಪ್ರತಿಕ್ರಿಯೆಯಲ್ಲಿ, “ಜನಿವಾರ ಧರ್ಮ ಹಾಗೂ ಸಂಪ್ರದಾಯದ ಸಂಕೇತ. ಪರೀಕ್ಷಾ ಕೇಂದ್ರದಲ್ಲಿ ಇದನ್ನು ತೆಗೆಸಿದುದು ಖಂಡನೀಯ. ಸಂವಿಧಾನದಲ್ಲಿ ಎಲ್ಲರಿಗೂ ಧಾರ್ಮಿಕ ಆಚರಣೆಗೆ ಹಕ್ಕು ಇದೆ. ಇದು ಸಂವಿಧಾನದ ವಿರುದ್ಧ ನಡೆಯುತ್ತಿರುವ ಕೆಲಸ” ಎಂದು ಕಿಡಿಕಾರಿದರು.
ಸಮುದಾಯ ಮೀರಿದ ಕೋಪ
ಈ ಘಟನೆ ಕೇವಲ ಬ್ರಾಹ್ಮಣ ಸಮುದಾಯವಲ್ಲದೆ, ದೇಶದ ಎಲ್ಲ ಧರ್ಮೀಯ ಸಮುದಾಯಗಳ ಧಾರ್ಮಿಕ ಹಕ್ಕಿಗೆ ಬೆನ್ನುತಗ್ಗಿಸುವ ಘಟನೆ ಎಂದು ತೀರ್ಥರು ಹೇಳಿದರು. “ಯಾವುದೇ ಧರ್ಮದ ವಿರೋಧಿ ಚಟುವಟಿಕೆಯನ್ನು ನಾವು ಒಪ್ಪಲಾರೆ. ಎಲ್ಲರೂ ಇದನ್ನು ಖಂಡಿಸಬೇಕು, ಪ್ರತಿಭಟಿಸಬೇಕು, ಎಂದು ಅವರು ಸ್ಪಷ್ಟಪಡಿಸಿದರು.
ಸರ್ಕಾರಕ್ಕೆ ತೀವ್ರ ಎಚ್ಚರಿಕೆ
ರಾಜ್ಯ ಸರ್ಕಾರ, ಸಚಿವರು ಹಾಗೂ ಶಾಸಕರು ಈ ಬಗ್ಗೆ ತಕ್ಷಣ ಸ್ಪಂದಿಸಿ, ಇಂತಹ ಘಟನೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. “ವಿಧಾರ್ಥಿಯ ಭವಿಷ್ಯ ಹಾಳಾಗಿದ್ದು ಮಾತ್ರವಲ್ಲ, ಧರ್ಮಕ್ಕೂ ಆಘಾತವಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು,” ಎಂದು ತೀರ್ಥರು ಎಚ್ಚರಿಸಿದರು.
ಪರಿಹಾರಕ್ಕಾಗಿ ಆಗ್ರಹ
ಕರ್ನಾಟಕದ ಶಾಂತಿ ಮತ್ತು ಸರ್ವಧರ್ಮ ಸಮಭಾವನೆಗೆ ಧಕ್ಕೆ ಬರುವಂಥ ನಿಯಮಗಳನ್ನು ಮಾಡುವುದು ಅನ್ಯಾಯ ಎಂದು ಅವರು ಬೇರೆಯ ಧರ್ಮೀಯರಿಗೆ ಇಂತಹ ನಿಯಮವಿಲ್ಲ, ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಇದನ್ನು ವಿಧಿಸುವುದು ಎಷ್ಟು ನ್ಯಾಯ? ಸರ್ಕಾರ ವಿದ್ಯಾರ್ಥಿಗೆ ತಕ್ಷಣ ಪರಿಹಾರ ನೀಡಬೇಕು, ಎಂದು ಆಗ್ರಹಿಸಿದರು.
ಈ ಘಟನೆ ರಾಜ್ಯ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದು ಕುತೂಹಲದ ವಿಷಯ.








