ರಾಮನಗರ: ಚನ್ನಪಟ್ಟಣ ಚುನಾವಣಾ ಕಣ ರಂಗೇರಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸ್ವತಃ ಅಖಾಡಕ್ಕೆ ಇಳಿದಿದ್ದಾರೆ. ಈ ಮಧ್ಯೆ ಮೊಮ್ಮಗನನ್ನು ಗೆಲ್ಲಿಸುವಂತೆ ಮುಸ್ಲಿಂ ಮತದಾರರಿಗೆ ಮನವಿ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ (Channapatna) ಅಲ್ಪಸಂಖ್ಯಾತ ಮತಗಳ ಸೆಳೆಯುವುದಕ್ಕಾಗಿ ಹೆಚ್.ಡಿ.ದೇವೇಗೌಡ ಇಂದು ಮುಸ್ಲಿಂ ಧರ್ಮಗುರುಗಳ ಮನೆಗೆ ಭೇಟಿ ನೀಡಿದ್ದಾರೆ. ಅಖಿಲ್ ಷಾ ಖಾದ್ರಿ ದರ್ಗಾದ ಧರ್ಮಗುರು ಸಯ್ಯದ್ ಮಸನ್ನ ಷಾ ಖಾದ್ರಿ ನಿವಾಸಕ್ಕೆ ಭೇಟಿ ನೀಡಿ, ಮತ ಹಾಕುವಂತೆ ಮನವಿ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರ ಜತೆ ದೇವೇಗೌಡರು ಪ್ರಚಾರ ಸಭೆ ನಡೆಸಿದರು. ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗೆ ಸಹಕರಿಸಿ ಎಂದು ಮುಸ್ಲಿಂ ಸಮಯದಾಯದ ಬೆಂಬಲ ಕೋರಿದರು. ಇತ್ತೀಚೆಗಷ್ಟೇ ಮುಸ್ಲಿಂ ಮುಖಂಡರ ಸಭೆ ನಡೆಸಿದ್ದರು. ಈಗ ಮತ್ತೆ ಧರ್ಮಗರುಗಳ ಮನೆಗೆ ಭೇಟಿ ನೀಡಿ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಂ ಮತಗಳು ಕೂಡ ನಿರ್ಣಾಯಕವಾಗಿವೆ.