ಕನ್ನಡದಲ್ಲಿಯೇ ಐಎಎಸ್ ಬರೆದು ಯಶಸ್ವಿಯಾಗಿದ್ದ ಮೊದಲ ಕನ್ನಡಿಗ ಹಾಗೂ ನಟ ಕೆ.ಶಿವರಾಮ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಕೆ. ಶಿವರಾಮ್ ಆರೋಗ್ಯ ಗಂಭೀರವಾಗಿದ್ದು, ವಿಚಾರಿಸಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರು ಆಸ್ಪತ್ರೆಗೆ ತೆರಳಿದ್ದಾರೆ. ಶಿವರಾಮ್ ಅವರ ಅಳಿಯ ಪ್ರದೀಪ್ ಈ ಕುರಿತು ಮಾಹಿತಿಯನ್ನು ಬಹಿರಂಗ ಮಾಡಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಫೆ.3ರಂದು ಕೆ.ಶಿವರಾಮ್ ಅವರನ್ನು ದಾಖಲಾಗಿದ್ದರು. ಕಳೆದ 6 ದಿನಗಳ ಹಿಂದೆ ಶಿವರಾಮ್ಗೆ ಹೃದಯಾಘಾತವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎನ್ನಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ. ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದರು.
ಸದ್ಯ ಎಚ್.ಸಿ.ಜಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪರಿಸ್ಥಿತಿ ಚಿಂತಾಜನಕವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕನ್ನಡದಲ್ಲೇ ಐಎಎಸ್ ಬರೆದು, ನಂತರ ಬೆಂಗಳೂರು, ವಿಜಯಪುರ, ಕೊಪ್ಪಳ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಆನಂತರ ಬಾ ನಲ್ಲೆ ಮಧುಚಂದ್ರಕೆ, ವಸಂತ ಕಾವ್ಯದಂತಹ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಸಾಂಗ್ಲಿಯಾನ 3 ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದರು.