ಅಹಮದಾಬಾದ್: ಏಕದಿನ ವಿಶ್ವಕಪ್ ಪಂದ್ಯಾವಳಿ ಆರಂಭವಾಗಿದೆ. ಇಂದು ಮೊದಲ ಪಂದ್ಯ ಮುಗಿದಿದ್ದು, ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಮೊದಲ ಪಂದ್ಯದಲ್ಲಿ ಜಯ ದಾಖಲಿಸಿದೆ.
ಈ ಪಂದ್ಯದಲ್ಲಿ ಕನ್ನಡಿಗನೇ ಆದ ನ್ಯೂಜಿಲೆಂಡ್ ಆಟಗಾರ ಭರ್ಜರಿ ಶತಕ ಸಿಡಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರಚಿನ್ ರವೀಂದ್ರ (Rachin Ravindra) ಈಗ ಎಲ್ಲರ ಮೆಚ್ಚುಗೆಗೆ ಕಾರಣರಾಗಿದ್ದಾರೆ. 23 ವರ್ಷದ ರಚಿನ್ ರವೀಂದ್ರ ಅವರ ಹೆಸರಿನ ಹಿಂದಿನ ಲೆಕ್ಕಾಚಾರಗಳು ನಡೆಯುತ್ತಿವೆ.
ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ 82 ಎಸೆತಗಳಲ್ಲಿಯೇ ಶತಕ (9 ಬೌಂಡರಿ, 4 ಸಿಕ್ಸರ್) ಪೂರೈಸಿದ ರಚಿನ್ ಒಟ್ಟಾರೆ 96 ಎಸೆತಗಳಲ್ಲಿ 5 ಸಿಕ್ಸರ್, 11 ಬೌಂಡರಿಗಳೊಂದಿಗೆ ಅಜೇಯ 123 ರನ್ ಸಿಡಿಲಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2ನೇ ವಿಕೆಟಿಗೆ 273 ರನ್‌ಗಳ ಜೊತೆಯಾಟದೊಂದಿಗೆ ನ್ಯೂಜಿಲೆಂಡ್‌ಗೆ (New Zealand) ಗೆಲುವು ತಂದುಕೊಟ್ಟಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಕೂಡ ರಚಿನ್ ಉತ್ತಮ ಪ್ರದರ್ಶನ ತೋರಿದ್ದರು.
ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್ ನಲ್ಲಿ ಜನಿಸಿದ್ದರೂ ಅವರ ತಂದೆ-ತಾಯಿ ಮೂಲತಃ ಬೆಂಗಳೂರಿನವರು. ತಂದೆ ರವಿ ಕೃಷ್ಣಮೂರ್ತಿ ಹಾಗೂ ತಾಯಿ ದೀಪಾ ಕೃಷ್ಣಮೂರ್ತಿ ಅವರು ಸಾಫ್ಟ್‌ವೇರ್ ಇಂಜಿನಿಯರ್ ಗಳಾಗಿದ್ದು, 1990ರ ದಶಕದಲ್ಲಿ ಬೆಂಗಳೂರಿನಿಂದ ನ್ಯೂಜಿಲೆಂಡ್‌ಗೆ ತೆರಳಿದ್ದರು. ರಚಿನ್ ಅವರ ತಂದೆ ಅಪ್ಪಟ ಕ್ರಿಕೆಟ್ ಪ್ರೇಮಿ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಪಕ್ಕಾ ಫ್ಯಾನ್. ಈ ಕಾರಣದಿಂದಾಗಿ ರಾಹುಲ್ ದ್ರಾವಿಡ್ (Rahul Dravid) ಹೆಸರಿನಿಂದ ʻರʼ ಮತ್ತು ಸಚಿನ್ ತೆಂಡೂಲ್ಕರ್ (Sachin Tendulkar) ಹೆಸರಿನಿಂದ ʻಚಿನ್ʼ ಅಕ್ಷರಗಳನ್ನು ತೆಗೆದುಕೊಂಡು ಅವರ ಪುತ್ರನಿಗೂ ಹೆಸರಿಟ್ಟಿದ್ದರು ಎನ್ನಲಾಗಿದೆ.
ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್ ಪರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದಾರೆ. 2016 ಮತ್ತು 2018ರಲ್ಲಿ ಕಾಣಿಸಿಕೊಂಡಿದ್ದರು. ನಂತರ ನ್ಯೂಜಿಲೆಂಡ್ ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.