ನಟ ಪ್ರಭಾಸ್ ಹಾಗೂ ಕೃತಿ ಸನೂನ್ (Kriti Sanoon) ಅಭಿನಯದ ‘ಆದಿಪುರುಷ’ (Adipurusha) ಸಿನಿಮಾ ದಿನದಿಂದ ದಿನಕ್ಕೆ ವಿವಾದಕ್ಕೆ ಕಾರಣವಾಗುತ್ತಿದೆ. ಇದರ ಟ್ರೈಲರ್ ಬಿಡುಗಡೆಯಾದಾಗ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಚಿತ್ರದ ಮೇಲಿತ್ತು. ಸಿನಿಮಾದ ಪೋಸ್ಟರ್ ನಲ್ಲೂ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದ್ದು, ಸಿನಿಮಾ ರಿಲೀಸ್ ಮಾಡದಂತೆ ದೂರು ದಾಖಲಾಗಿದೆ.
ಸಂಜಯ್ ತಿವಾರಿ ಎಂಬ ವ್ಯಕ್ತಿ ಬಾಂಬೆ (Mumbai) ಹೈಕೋರ್ಟ್ (High Court) ಮೆಟ್ಟಿಲು ಏರಿದ್ದು, ಈಗಾಗಲೇ ರಿಲೀಸ್ ಆದ ಪೋಸ್ಟರ್ ನಲ್ಲಿ ನಿರ್ಮಾಪಕರು ಮತ್ತು ಕಲಾವಿದರು ಗಂಭೀರ ತಪ್ಪುಗಳನ್ನು ಮಾಡಿದ್ಧಾರೆ. ಈ ತಪ್ಪುಗಳು ನಾಳೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು. ಅಲ್ಲದೇ, ಒಂದು ವರ್ಗದ ಜನರ ಧಾರ್ಮಿಕ ಭಾವನೆಗೂ ನೋವು ಅನುಭವಿಸುವಂತಾಗಬಹುದು. ಸಿನಿಮಾದಲ್ಲಿ ಅಂತಹ ತಪ್ಪುಗಳು ನುಸುಳದಂತೆ ನಿರ್ದೇಶನ ನೀಡಬೇಕು ಎಂದು ಅವರು ದೂರಿನಲ್ಲಿ (Complaint) ಉಲ್ಲೇಖಿಸಿದ್ದಾರೆ.
`ಆದಿಪುರುಷ್’ ಸಿನಿಮಾದ ಟೀಸರ್‌ಗೆ ಕಳಪೆ ಗ್ರಾಫಿಕ್ಸ್ ವರ್ಕ್ ನೋಡಿ, ನೆಟ್ಟಿಗರಿಂದ ಚಿತ್ರತಂಡಕ್ಕೆ ಭಾರಿ ಟೀಕೆ ಎದುರಿಸಿತ್ತು. ಹಾಗಾಗಿ ಒಂದಿಷ್ಟು ಬದಲಾವಣೆಯೊಂದಿಗೆ ಬರುತ್ತೇವೆ ಎಂದು ತಿಳಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಓಂ ರೌತ್ `ಆದಿಪುರುಷ್’ ರಿಲೀಸ್‌ಗೆ ಇನ್ನು ಕೆಲ ದಿನಗಳು ಬಾಕಿ ಇದೆ ಎಂದು ಪೋಸ್ಟರ್ ಹಂಚಿಕೊಳ್ಳುವ ಮೂಲಕ ಚಿತ್ರ ಜೂನ್ 16ಕ್ಕೆ ತೆರೆ ಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ. 3ಡಿ ರೂಪದಲ್ಲಿ ಸಿನಿಮಾ ತೆರೆಗೆ ಬರಲಿದೆ.







