ರಾಜ್ಯದಲ್ಲಿ ಚುನಾವಣಾ ಕಾವು ರಂಗೇರಿದೆ. ಹೀಗಾಗಿ ಘಟಾನುಘಟಿ ನಾಯಕರು ರಾಜ್ಯದಲ್ಲಿ ಬಿಡು ಬಿಟ್ಟಿದ್ದು, ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಮೈಸೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ನಡೆಸಿದ್ದು, ಅದರ ಬೆನ್ನಲ್ಲಿಯೇ ಇಂದು ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭರ್ಜರಿ ಪ್ರಚಾರ ಹಮ್ಮಿಕೊಂಡಿದ್ದಾರೆ.
ಇಂದು ಒಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೈ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
ಎಚ್.ಡಿ. ದೇವೇಗೌಡ ಅವರು, ಬೆಳಗ್ಗೆ 11ಕ್ಕೆ ಪಿರಿಯಾಪಟ್ಟಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದು, ಪಿರಿಯಾಪಟ್ಟಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ ಮಹದೇವ ಪರ ಮತಯಾಚನೆ ನಡೆಸಲಿದ್ದಾರೆ. ಮಧ್ಯಾಹ್ನ ಕೆ ಆರ್ ನಗರ ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ಪರ ಮತಯಾಚನೆ ನಡೆಸಿ, ಹೊಸೂರು, ಸಾಲಿಗ್ರಾಮ, ಮಿರ್ಲೆ ಗ್ರಾಮದಲ್ಲಿ ಪ್ರಚಾರ ನಡೆಸುವರು.
ಇನ್ನೂ ಕುಮಾರಸ್ವಾಮಿ ಅವರು ಬೆಳಿಗ್ಗೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಹಮ್ಮಿಕೊಂಡು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ವಿಜಯನಗರದ ಸಪ್ತಪದಿ ಕಲ್ಯಾಣಮಂಟಪದಲ್ಲಿ ಸಭೆ ನಡೆಸಿ, ಜೆಡಿಎಸ್ ಅಭ್ಯರ್ಥಿ ರಮೇಶ್ ಪರ ಮತಯಾಚನೆ ನಡೆಸಲಿದ್ದಾರೆ. ನಂತರ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಜೆಡಿಎಸ್ ಅಭ್ಯರ್ಥಿ ಕೆ ವಿ ಮಲ್ಲೇಶ್ ಪರ ಮತಯಾಚನೆ ನಡೆಸವರು.
ಮಧ್ಯಾಹ್ನ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿ, ಭಾರತಿ ಶಂಕರ್ ಪರ ಮತ ಬೇಟೆ ಆರಂಭಿಸಲಿದ್ದಾರೆ. ನಂತರ ಟಿ. ನರಸೀಪುರ ಚುಂಚನಗಿರಿ ಸಮುದಾಯ ಭವನದ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಪ್ರಿಯಾಂಕಾ ಗಾಂಧಿ ಅವರು, ಸುತ್ತೂರಿಗೆ ಆಗಮಿಸಿ ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಟಿ ನರಸೀಪುರ ತಾಲ್ಲೂಕಿನ ಹೆಳವರಹುಂಡಿಯಲ್ಲಿ ಸಭೆ ನಡೆಸಿ, ಡಾ ಹೆಚ್ ಸಿ ಮಹದೇವಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಹನೂರಿನಲ್ಲಿ ಪ್ರಚಾರ ನಡೆಸಿ, ಸಂಜೆ ಕೆ.ಆರ್. ನಗರದಲ್ಲಿ ರೋಡ್ ಶೋದಲ್ಲಿ ಭಾಗವಹಿಸಿ ರವಿಶಂಕರ್ ಪರ ಮತಯಾಚಿಸಲಿದ್ದಾರೆ.