Congress | ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರ
ಬೆಂಗಳೂರು : ಪಂಜಾಬ್ ನಲ್ಲಿ ನಮ್ಮದೇ ತಪ್ಪಿನಿಂದ ಸೋತಿದ್ದೇವೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮ ಮಾತುಗಳು ನರಿ ಮತ್ತು ಹುಳಿ ದ್ರಾಕ್ಷಿಯ ಕಥೆ ನೆನಪಿಸುತ್ತಿದೆ. ಇದು ನೀವು ಮಾಡಿದ ತಪ್ಪಿನಿಂದಾದ ಸೋಲು ಅಲ್ಲ, ಇದು ನಿಮ್ಮ ಕರ್ಮದ ಫಲ ಎಂದು ಕುಟುಕಿದೆ.
ಅಲ್ಲದೇ ಚುನಾವಣೆಯಲ್ಲಿ ಸ್ಥಾನಗಳು ಸಿಗದಿದ್ದರೂ, ಕಾಂಗ್ರೆಸ್ ಪ್ರತಿ ಬೀದಿ, ಪ್ರದೇಶವನ್ನು ತಲುಪಿದೆ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹೇಳಿಕೆಗೂ ತಿರುಗೇಟು ಕೊಟ್ಟಿರುವ ಬಿಜೆಪಿ, ಜಟ್ಟಿ ಮಣ್ಣಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಇದು ಕಾಂಗ್ರೆಸ್‌ಗೆ ಹೇಳಿ ಮಾಡಿಸಿದ ಮಾತು. ಕಾಂಗ್ರೆಸ್ ಪ್ರತಿ ಬೀದಿ ತಲುಪಿದ್ದಲ್ಲ, ಬೀದಿಗೆ ಬಿದ್ದಿದ್ದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಆತ್ಮಾವಲೋಕನ ಮಾಡಿಕೊಳ್ಳುವ ಸಮಯದಲ್ಲಿ ಆತ್ಮಾರಾಧನೆ ಮಾಡಿಕೊಳ್ಳುವ ಕಾಂಗ್ರೆಸ್ ಭವಿಷ್ಯ ಇನ್ನಷ್ಟು ಘೋರವಾಗಿರಲಿದೆ ಎಂದು ಎಚ್ಚರಿಸಿದೆ.
ಇನ್ನು ಯುವ ಕಾಂಗ್ರೆಸ್‌ಗೆ ಕೇವಲ 2 ಸಾವಿರ ಸದಸ್ಯರ ನೇಮಕ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಹರಿಹಾಯ್ದಿದ್ದಾರೆ. ಎಷ್ಟೇ ಒತ್ತಾಯ ಮಾಡಿದರೂ ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಕಡೆ ಯುವ ಜನತೆ ಒಲವು ತೋರುತ್ತಿಲ್ಲ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಅಪ್ರಸ್ತುತ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ಬಿಜೆಪಿ ಕುಟುಕಿದೆ.
karnataka congress-bjp twitter war