Karnataka : ನವಭಾರತ ಸೇನಾ ಆರಂಭೋತ್ಸವದ ಅಧ್ಯಕ್ಷತೆ ವಹಿಸಿದ್ದ ಜೆಡಿಯು ಮಾಜಿ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ…
ಬೆಂಗಳೂರು: ನಾನು ಒಂದು ರಾಜಕೀಯ ಪಕ್ಷದ ಮುಖ್ಯಸ್ಥನಾಗಿದ್ದುಕೊಂಡೂ ಇನ್ನೊಂದು ರಾಜಕೀಯ ಸಂಘಟನೆಯು ಆರಂಭೋತ್ಸವ ವೇದಿಕೆ ಹಂಚಿಕೊಂಡಿದ್ದೇನೆ. ನನ್ನ ಈ ತೀರ್ಮಾನಕ್ಕೆ ಈ ಸಂಘಟನೆಯ ಧ್ಯೇಯೋದ್ದೇಶಗಳೇ ಕಾರಣ ಎಂದು ವಿಧಾನ ಪರಿಷತ್ ಮಾಜೀ ಸದಸ್ಯ ಹಾಗೂ ಜೆಡಿಯು ಮಾಜಿ ಅಧ್ಯಕ್ಷ ಡಾ.ಎಂ.ಪಿ.ನಾಡಗೌಡ ಹೇಳಿದರು.
ಹಲವಾರು ರಾಜಕೀಯ ಸಂಘಟನೆಗಳು ವಿವಿಧ ಹುದ್ದೆಗಳಲ್ಲಿ ಅನುಭವ ಗಳಿಸಿರುವ ರುಕ್ಮಾಂಗದ ಅವರ ನೇತೃತ್ವದ ನವಭಾರತ ಸೇನಾ ಆರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಡಗೌಡರು ತಮ್ಮ ಈ ನಿರ್ಧಾರಕ್ಕೆ ಈ ಸಂಘಟನೆಯ ತತ್ವಾದರ್ಶ ಮತ್ತು ಧ್ಯೇಯೋದ್ದೇಶಗಳೇ ಕಾರಣ ಎಂದರು.
ಯಾವುದೇ ಪಕ್ಷದಲ್ಲಿ ಕಷ್ಟಪಟ್ಟು ದುಡಿಯುವ ವ್ಯಕ್ತಿಗೆ ಅಧಿಕಾರ ಸಿಗುತ್ತದೆ. ಆದರೆ ಆತನ ಧ್ಯೇಯೋದ್ದೇಶಗಳ ಅನುಷ್ಠಾನಕ್ಕೆ ಅವಕಾಶ ಸಿಗುವುದಿಲ್ಲ ಎಂಬುದೇ ಅತ್ಯಂತ ವಿಷಾದದ ಸಂಗತಿ ಎಂದು ನಾಡಗೌಡರು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿ ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ಈಗಾಗಲೇ ಹಲವಾರು ಪಕ್ಷಗಳಿಂದ ತುಂಬಿ ತುಳುಕುತ್ತಿರುವ ಪ್ರಸಕ್ತ ರಾಜಕಾರಣ ಕ್ಷೇತ್ರಕ್ಕೆ ಇನ್ನೊಂದು ರಾಜಕೀಯ ಸಂಘಟನೆಯ ಅಗತ್ಯವಿದೆಯೇ ಎಂದು ಪ್ರಶ್ನಿಸುತ್ತ ಅವರ ಪ್ರಶ್ನೆಗೆ ಅವರೇ ಉತ್ತರವನ್ನೂ ಕೊಟ್ಟರು.
ಈ ರಾಜಕೀಯ ಸಂಘಟನೆ ಹಮ್ಮಿಕೊಂಡಿರುವ ಮಧ್ಯಮ, ಕೆಳ ಮಧ್ಯಮ ಮತ್ತು ಶೋಷಿತರ ಕಣ್ಣೀರೊರೆಸುವ ಧ್ಯೇಯೋದ್ದೇಶ ನನಗೆ ತುಂಬಾ ಮೆಚ್ಚುಗೆ ಯಾಯಿತು. ಹಾಗಾಗಿ ಈ ಸಂಘಟನೆಗೆ ನನ್ನ ಬೆಂಬಲ ನೀಡುತ್ತಿದ್ದೇನೆ ಎಂದರು.
ಹಲವಾರು ರಾಜಕೀಯ ಸಂಘಟನೆಗಳ ವಿವಿಧ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದ ರುಕ್ಮಾಂಗದ ಅವರು ಆ ಪಕ್ಷಗಳಲ್ಲಿ ತಮ್ಮ ಕನಸು ಸಾಕಾರವಾಗದಿದ್ದಾಗ ಅಲ್ಲಿಂದ ಹೊರಬಿದ್ದು ತಮ್ಮ ಧ್ಯೇಯೋದ್ದೇಶಗಳ ಸಾಕಾರಕ್ಕೆ ತಮ್ಮ ಬೆಂಬಲಿಗರೊಂದಿಗೆ “ನವಭಾರತ ಸೇನಾ ” ಎಂಬ ನೂತನ ಸಂಘಟನೆ ಯೊಂದನ್ನು ಆರಂಭಿಸಿದ್ದಾರೆ.
ರುಕ್ಮಾಂಗದ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಈ ಸೇನೆಯ ರೂಪು ರೇಷೆಗಳನ್ನು ವಿವರಿಸುತ್ತಾ ಮಧ್ಯಮ, ಕೆಳಮಧ್ಯಮ ಮತ್ತು ಶೋಷಿತರ ವರ್ಗಗಳ ದನಿ ಯಾಗುವುದೇ ಸಂಘಟನೆಯ ಮುಖ್ಯ ಉದ್ದೇಶ ಎಂದರು.
ಯಾವುದೇ ಜಾತಿ, ಮತ, ಕೋಮುಗಳ ಓಲೈಕೆಯಿಲ್ಲದ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಅವರ ತತ್ವಾದರ್ಶಗಳೇ ನಮ್ಮ ಬೀಜಮಂತ್ರ ಎಂದರು.
ನಮಗೆ ಅಧಿಕಾರ ಬೇಡ. ನಮ್ಮ ಕಾರ್ಯಕರ್ತರೇ ನಮ್ಮ ಮಾರ್ಗಪ್ರವರ್ತಕರು ಎಂದು ವಿವರಿಸಿದರು.
Hijab Controvercy : ಧೈರ್ಯ ಇದ್ದರೆ ಹೋಗಿ ಬುರ್ಖಾ ಧರಿಸಿದೇ ಅಫ್ಗಾನಿಸ್ತಾನದಲ್ಲಿ ಓಡಾಡಿ : ಕಂಗನಾ
ಈ ಸಂಘಟನೆ ಹೋಬಳಿ ಮಟ್ಟದಿಂದ ರಾಷ್ಟ್ರ ಮಟ್ಟದ ವರೆಗೂ ವ್ಯಾಪಿಸಲಿದ್ದು ಈಗಾಗಲೇ ಒಂಬತ್ತು ರಾಜ್ಯಗಳಲ್ಲಿ ಅಸ್ತಿತ್ವಕ್ಕೆ ಬರುತ್ತಿದೆ ಎಂದೂ ರುಕ್ಮಾಂಗದ ಹೇಳಿದರು.
ಸಮಾರಂಭದಲ್ಲಿ ಗೋಡವಾಡ್ ಭವನದ ಕಾರ್ಯದರ್ಶಿ ಕುಮಾರ್ ಪಾಲ್ ಸಿಸೋಡಿಯಾ, ಸಮಾಜ ಸೇವಕ ಕೆ.ಪಿ.ಪಾಟೀಲ್, ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ರವಿ ರೇಡ್ಕರ್, ಚಲನಚಿತ್ರ ನಟ ರಾಜಶೇಖರ್, ಕೋಲಾರ ಜಿಲ್ಲಾ ಹಿಂದು ಪರಿಷತ್ ಅಧ್ಯಕ್ಷ ನಾರಾಯಣ ಸ್ವಾಮಿ, ನ್ಯಾಯವಾದಿ ಸಂದರ್ಶಿಣಿ ಡಿ.ಕೆ. ಉಪಸ್ಥಿತರಿದ್ದು ಸಂಘಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದರು.
ಶಿಶಿರ ಸಂಗೀತ ಶಾಲೆಯ ಸ್ಥಾಪಕ,ಚಿತ್ರ ಸಂಗೀತರಚನೆ ಕಾರ, ಧಾರಾವಾಹಿ ನಿರ್ಮಾಪಕ ಜೆಮ್ ಶಿವು ಅವರು ಸಂಘಟನೆಯ ಧ್ಯೇಯೋದ್ದೇಶ ಕುರಿತು ಮೂರು ಹಾಡುಗಳನ್ನು ರಚಿಸಿದ್ದು ಒಂದು ಹಾಡನ್ನು ಹಾಡಿದರು.
ಸಮಾರಂಭದಲ್ಲಿ ವಿವಿಧ ವಾರ್ಡುಗಳ ಸಂಚಾಲಕರ ನೇಮಕ ಪ್ರಕಟಿಸಿ ಧ್ವಜ ನೀಡಲಾಯಿತು.
ಶೋಭಾ ರಾಣಿಯವರು ಮಹಿಳಾ ಘಟಕದ ಸಂಚಾಲಕರಾಗಿದ್ದಾರೆ.
ಸಂಘಟನೆಯ ಮಾಧ್ಯಮ ಸಲಹೆಗಾರ ದತ್ತಾತ್ರೇಯ ಹೆಗಡೆ ಸ್ವಾಗತಿಸಿದರು. ಉಮಾ ಅವರು ಕಾರ್ಯಕ್ರಮ ನಿರೂಪಿಸಿದರು.