ನವದೆಹಲಿ: ಅಬಕಾರಿ ಹಗರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಹೊರಗೆ ಬಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಜೂನ್ 2 ರಂದು ಮತ್ತೆ ಜೈಲಿಗೆ ಹೋಗಲಿದ್ದಾರೆ. ಈ ಸಂದರ್ಭದಲ್ಲಿ ಜನರಲ್ಲಿ ಭಾವನಾತ್ಮಕವಾಗಿ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪೋಷಕರಿಗೆ ವಯಸ್ಸಾಗಿದೆ. ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೈಲಿನಲ್ಲಿ ಕೂಡ ನಾನು ಚಿಂತಿತನಾಗಿರುತ್ತೇನೆ. ಹೀಗಾಗಿ ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ನನ್ನ ಪತ್ನಿ ಸುನೀತಾ ತುಂಬಾ ಧೈರ್ಯವಂತೆ. ಕಷ್ಟದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತಿದ್ದಾಳೆ. ನನ್ನ ಜೀವನದಲ್ಲಿ ಕಷ್ಟದ ಸಮಯ ಬಂದಾಗ, ನೀವೆಲ್ಲರೂ ನನಗೆ ಬೆಂಬಲ ನೀಡಿದ್ದೀರಿ. ನನ್ನ ಪ್ರಾಣ ಹೋದರೂ ಸರ್ವಾಧಿಕಾರದ ವಿರುದ್ಧ ಹೋರಾಡುತ್ತೇನೆ. ದುಃಖಿಸಬೇಡಿ, ನಾನು ಇಂದು ಜೀವಂತವಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವು ನನ್ನನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ.
ನಾನು ಜೈಲಿನಲ್ಲಿದ್ದರೂ ದೆಹಲಿಯ ಜನರಿಗೋಸ್ಕರ ನನ್ನ ಸೇವೆ ನಿಲ್ಲಲ್ಲ ಎಂದು ಭರವಸೆ ನೀಡಲು ಬಯಸುತ್ತೇನೆ ಎಂದ ಅವರು, ಮತ್ತೆ ಶರಣಾಗಲು ನಾನು ಭಾನುವಾರ ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೊರಡುತ್ತೇನೆ. ಈ ಬಾರಿ ಅವರು ನನ್ನನ್ನು ಹೆಚ್ಚು ಹಿಂಸಿಸುವ ಸಾಧ್ಯತೆಯಿದೆ. ಆದರೆ ಇದಕ್ಕೆ ನಾನು ತಲೆಕೆಡಿಸಲ್ಲ ಎಂದು ಹೇಳಿದ್ದಾರೆ. ಸುಪ್ರೀಂಕೋರ್ಟ್ ನನಗೆ ಪ್ರಚಾರಕ್ಕೆ 21 ದಿನಗಳ ಕಾಲಾವಕಾಶ ನೀಡಿತ್ತು. ನಾಳೆಗೆ 21 ದಿನಗಳು ಪೂರ್ಣಗೊಳ್ಳುತ್ತಿವೆ. ಭಾನುವಾರ ನಾನು ಶರಣಾಗಬೇಕಾಗಿದ್ದು, ಮತ್ತೆ ತಿಹಾರ್ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ನನ್ನನ್ನು ಹಲವು ರೀತಿಯಲ್ಲಿ ಬಗ್ಗಿಸಲು ಪ್ರಯತ್ನಿಸಿದರೂ, ಯಶಸ್ವಿಯಾಗಲಿಲ್ಲ. ನನ್ನನ್ನು ಹಲವು ರೀತಿಯಲ್ಲಿ ಹಿಂಸಿಸುತ್ತಿದ್ದರು. ನಾನು 20 ವರ್ಷಗಳಿಂದ ಮಧುಮೇಹ ರೋಗಿಯಾಗಿದ್ದೇನೆ. ಕಳೆದ 10 ವರ್ಷಗಳಿಂದ ನಾನು ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಜೈಲಿನಲ್ಲಿ ಅವರು ಹಲವಾರು ದಿನಗಳವರೆಗೆ ಇನ್ಸುಲಿನ್ ನಿಲ್ಲಿಸಿದ್ದರು. ನನ್ನ ಶಗರ್ ಲೆವೆಲ್ 300 ತಲುಪಿತು. 50 ದಿನಗಳ ಕಾಲ ಜೈಲಿನಲ್ಲಿದ್ದೆ. ಈ 50 ದಿನಗಳಲ್ಲಿ ನಾನು 6 ಕೆ.ಜಿ ತೂಕವನ್ನು ಕಳೆದುಕೊಂಡೆ. ಜೈಲಿಗೆ ಹೋದಾಗ 70 ಕೆಜಿ ಇದ್ದ ನನ್ನ ತೂಕ ಇಂದು 64 ಕೆ.ಜಿ ಆಗಿದೆ ಎಂದು ಹೇಳಿದ್ದಾರೆ.