ವಯನಾಡಿನಲ್ಲಿ ಸಂಭವಿಸಿದ (Wayanad Landslide) ಭೂಕುಸಿತದಲ್ಲಿ ಸಾವನ್ನಪ್ಪಿದವ ಸಂಖ್ಯೆ 350ರ ಗಡಿ ದಾಟಿದೆ. ಈ ದುರಂತದಲ್ಲಿ ಮನೆ, ಕುಟುಂಬಸ್ಥರನ್ನು ಕಳೆದುಕೊಂಡ ಹಲವರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಹಲವಾರು ಜನರು ತಮ್ಮ ಕೈಲಾದಷ್ಟು ದೇಣಿಗೆ ನೀಡಿ, ನಿರಾಶ್ರಿತರ ಬದುಕಿಗೆ ಆಸರೆಯಾಗಿ ನಿಂತಿದ್ದಾರೆ. ಈ ಮಧ್ಯೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮತ್ತು ರಾಮ್ ಚರಣ್ (Ram Charan) 1 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ವಯನಾಡು ಭೂಕುಸಿತದಿಂದಾಗಿ ಸಂಕಷ್ಟದಲ್ಲಿರುವವರಿಗೆ ಚಿರಂಜೀವಿ ಮತ್ತು ರಾಮ್ ಚರಣ್ ಕೇರಳದ ಸಿಎಂ ಫಂಡ್ ಗೆ 1 ಕೋಟಿ ರೂ. ದೇಣಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಕೆಲವು ದಿನಗಳಿಂದ ಕೇರಳದಲ್ಲಿ ಪ್ರಕೃತಿಯ ವಿಕೋಪಕ್ಕೆ ನೂರಾರು ಜನರು ಪ್ರಾಣ ಕಳೆದುಕೊಂಡಿದಕ್ಕೆ ತೀವ್ರ ನೋವಾಗಿದೆ. ವಯನಾಡು ದುರಂತದ ಸಂತ್ರಸ್ತರಿಗಾಗಿ ನನ್ನ ಮನ ಮಿಡಿಯುತ್ತಿದೆ. ಚರಣ್ ಮತ್ತು ನಾನು ಕೇರಳದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡುವ ಮೂಲಕ ಸಂಕಷ್ಟದಲ್ಲಿರುವವರ ಬೆಂಬಲಕ್ಕೆ ನಿಲ್ಲುತ್ತೇವೆ. ಅವರೆಲ್ಲರಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೆಗಾಸ್ಟಾರ್ ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಚಿರಂಜೀವಿ ಹಾಗೂ ಅವರ ಮಗನ ಮಾನವೀಯತೆಗೆ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಹಲವಾರು ನಟ -ನಟಿಯರು ಕೂಡ ವಯನಾಡು ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ದೇಣಿಗೆ ನೀಡಿದ್ದಾರೆ. ಅಲ್ಲು ಅರ್ಜುನ್ 25 ಲಕ್ಷ , ರಶ್ಮಿಕಾ ಮಂದಣ್ಣ (Rashmika Mandanna), ಸೂರ್ಯ ದಂಪತಿ, ಮಮ್ಮುಟ್ಟಿ, ಚಿಯಾನ್ ವಿಕ್ರಮ್, ದುಲ್ಕರ್ ಸಲ್ಮಾನ್, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ಸಿಎಂ ಫಂಡ್‌ಗೆ ಲಕ್ಷ ಲಕ್ಷ ದೇಣಿಗೆ ನೀಡುವ ಮೂಲಕ ಸಹಾಯ ಮಾಡಿದ್ದಾರೆ.