ಕೆಜಿಎಫ್, ಕನ್ನಡ ಚಿತ್ರರಂಗದ ತಾಕತ್ತನ್ನು ವಿಶ್ವಕ್ಕೆ ತೋರಿಸಿಕೊಟ್ಟ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಚಿತ್ರಕ್ಕಾಗಿ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ತುದಿಗಾಲಿನಲ್ಲಿ ಕಾಯುತ್ತಿದೆ. ಕೆಜಿಎಫ್ ನ ಮೊದಲ ಭಾಗ ನೋಡಿದ ಸಿನಿಪ್ರಿಯರು ಪಾಟ್-2ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಭಾಗಕ್ಕಿಂತ ಕೆಜಿಎಫ್ ಎರಡನೆ ಭಾಗ ಮತ್ತಷ್ಟು ರೋಚಕವಾರಿರಲಿದ್ದು, ರಾಕಿ ಭಾಯ್ ಜೊತೆ ದೊಡ್ಡ ದೊಡ್ಡ ಕಲಾವಿದರು ಸಾಥ್ ನೀಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಮತ್ತೊಂದು ಲೆವೆಲ್ ಗೆ ಹೋಗಿದೆ.
ಸದ್ಯ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ಜೊತೆಗೀಗ ಕೆಜಿಎಫ್-2 ಚಿತ್ರದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಭಾರತ ಬಹುನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ.
ಹೌದು..! ಇತ್ತೀಚಿಗೆ ಒರ್ಮಾಕ್ಸ್ ಮಿಡಿಯಾ ರಿಲೀಸ್ ಮಾಡಿರುವ 2020ರ ಬಹುನಿರೀಕ್ಷೆಯ ಹಿಂದಿ ಸಿನಿಮಾಗಳ ಲಿಸ್ಟ್ ನಲ್ಲಿ ಕನ್ನಡದ ಸಿನಿಮಾ ಕೆಜಿಎಫ್-2 ಮೊದಲ ಸ್ಥಾನದಲ್ಲಿದೆ. ಕನ್ನಡದ ಸಿನಿಮಾವೊಂದು ಬಾಲಿವುಡ್ ನ ಸ್ಟಾರ್ ನಟರ ಸಿನಿಮಾಗಳನ್ನು ಹಿಂದಿಕ್ಕಿ ವರ್ಷದ ನಿರೀಕ್ಷೆಯ ಸಿನಿಮಾವಾಗಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದೆ.
ಕೆಜಿಎಫ್-2 ಕನ್ನಡದ ಸಿನಿಮಾ. ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಿಂದಿಗೆ ಡಬ್ ಆಗಿ ರಿಲೀಸ್ ಆಗುವ ಕನ್ನಡ ಸಿನಿಮಾಗೆ ಈ ಪರಿ ಬೇಡಿಕೆ ಇರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.