ಕೆಜಿಎಫ್ ಪ್ರಚಾರಕ್ಕಾಗಿ ದೆಹಲಿಗೆ ಹಾರಿದ ರಾಕಿಭಾಯ್ ಮತ್ತು ತಂಡ
ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ಕೇವಲ 14 ದಿನಗಳು ಬಾಕಿ ಉಳಿದಿದ್ದು, ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಕ್ಷಣವಾಗಲಿದೆ ಎನ್ನುವ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ. ದಿನಕಳೆದಂತೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚುತ್ತಿದೆ. ಕೆಜಿಎಫ್ 2 ಟ್ರೇಲರ್ನ ಭಾರೀ ಯಶಸ್ಸಿನ ನಡುವೆ ಈಗ ನಿರ್ಮಾಪಕರು ಪ್ರಚಾರ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೆಜಿಎಫ್ 2, ಏಪ್ರಿಲ್ 14 ರಂದು ವಿಶ್ವದಾದ್ಯಂತ ಥಿಯೇಟರ್ ಬಿಡುಗಡೆಗೆ ಲಾಕ್ ಆಗಿದೆ. ಕೆಜಿಎಫ್ 1 ರ ಅಬ್ಬರದ ಯಶಸ್ಸಿನೊಂದಿಗೆ, ಚಾಪ್ಟರ್ 2 ನಿರೀಕ್ಷೆ ಮಿತಿ ಮೀರಿದೆ. ಟೀಸರ್, ಪೋಸ್ಟರ್, ಲಿರಿಕಲ್ ವಿಡಿಯೋ ಸಾಂಗ್ ಮತ್ತು ಟ್ರೇಲರ್ ಗಳಿಸಿರುವ ವೀವ್ಸ್ ಮತ್ತು ಲೈಕ್ಗಳಿಂದ ಸಾಕಷ್ಟು ಸ್ಪಷ್ಟವಾಗಿದೆ.
#KGFChapter2 Promotions Begins!💥@Thenameisyash @prashanth_neel @VKiragandur @hombalefilms @HombaleGroup @duttsanjay @TandonRaveena @SrinidhiShetty7 @Karthik1423 @KRG_Connects pic.twitter.com/OqRWLiTMOL
— KRG Connects (@KRG_Connects) March 31, 2022
ಕನ್ನಡದ ಸಿನಿಮಾವಾಗಿದ್ದರೂ ಕೆಜಿಎಫ್ನ ಜನಪ್ರಿಯತೆ ಸಾಗರೋತ್ತರವನ್ನ ದಾಟಿದೆ. ರಾಕಿಂಗ್ ಸ್ಟಾರ್ ಯಶ್ ಆಲಿಯಾಸ್ ರಾಕಿ ಭಾಯ್ ಈಗ ಭಾರತದಾದ್ಯಂತ ಮನೆಮಾತಾಗಿದ್ದಾರೆ. ಪ್ರಸ್ತುತ ಅಂಕಿ ಅಂಶಗಳ ಪ್ರಕಾರ, ಬಾಹುಬಲಿ ಸಿನಿಮಾದ ಭಾರೀ ಯಶಸ್ಸಿನ ನಂತರ, ಹಲವಾರು ದಕ್ಷಿಣ ಚಲನಚಿತ್ರಗಳು ಉತ್ತರದಲ್ಲಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ. ಹೀಗಾಗಿ, ಯಶ್ ತಮ್ಮ ಮುಂಬರುವ ಚಿತ್ರದ ಪ್ರಚಾರಕ್ಕಾಗಿ ದೇಶದ ಹೃದಯಭಾಗವಾದ ದೆಹಲಿಯಿಂದಲೇ ತಮ್ಮ ಹೆಜ್ಜೆಗಳನ್ನು ಪ್ರಾರಂಭಿಸಿದ್ದಾರೆ. ಯಶ್, ಶ್ರೀನಿಧಿ ಶೆಟ್ಟಿ ಮತ್ತು ಚಿತ್ರತಂಡ ಚಿತ್ರದ ಪ್ರಚಾರಾರ್ಥ ದೆಹಲಿಗೆ ಹಾರಿದ್ದಾರೆ. ಚಾರ್ಟರ್ ಫ್ಲೈಟ್ನಲ್ಲಿ ದೆಹಲಿಗೆ ಪ್ರಯಾಣಿಸುತ್ತಿರುವ ಪೋಟೋಗಳು ಟ್ವೀಟರ್ ನಲ್ಲಿ ವೈರಲ್ ಆಗಿವೆ.
ಈ ಮಧ್ಯೆ ಹೊಂಬಾಳೆ ಫಿಲ್ಮ್ಸ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ಟ್ವೀಟ್ ಮಾಡಿ “#KGFChapter1 ಸಬ್ಸಿಡಿ ದರದಲ್ಲಿ ದೇಶಾದ್ಯಂತ ಏಪ್ರಿಲ್ 8-13 ರವರೆಗೆ ಆಯ್ದ ಥಿಯೇಟರ್ ಗಳಲ್ಲಿ ರಿರಿಲೀಸ್ ಆಗಲಿದೆ” ಎಂದು ತಿಳಿಸಿದ್ದಾರೆ. ಕೆಜಿಎಫ್ ಚಾಪ್ಟರ್ 1 ಚಿತ್ರವನ್ನ ಥಿಯೇಟರಗಳಲ್ಲಿ ಮಿಸ್ ಮಾಡಿಕೊಂಡವರು ಮತ್ತೆ ನೋಡಬಹುದು, ಚಾಪ್ಟರ್ 2 ಅರ್ಥಮಾಡಿಕೊಳ್ಳಲು ಇದು ಸಹಾಯಕವಾಗುತ್ತದೆ.