KGF ಚಾಪ್ಟರ್ 2 ತೆಲುಗಿನ ಡಬ್ಬಿಂಗ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್
ಇಡೀ ಭಾರತೀಯ ಸಿನಿಮಾರಂಗವೇ ಜಾಕತ ಪಕ್ಷಿಯಂತೆ ಕಾದು ಕುಳಿತಿರುವ ಹೈ ಓಲ್ಟೇಜ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ತೆಲುಗಿನ ಹಕ್ಕು ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ. ಚಾಪ್ಟರ್ 1 ಸಿನಿಮಾ ರಿಲೀಸ್ ಮಾಡಿದ್ದ ವಿತರಕ ಈ ಸಲ ಹಿಂದೆ ಸರಿದಿದ್ದು, ತೆಲುಗಿನ ಡಬ್ಬಿಂಗ್ ರೈಟ್ಸ್ ಅನ್ನು ತೆಲುಗಿನ ಪ್ರಸಿದ್ಧ ನಿರ್ಮಾಪಕ ದಿಲ್ ರಾಜು ಪಡೆದುಕೊಂಡಿದ್ದಾರೆ ಎಂದು ಹೊಂಬಾಳೆ ಫಿಲ್ಮ್ ಹೌಸ್ ಹೇಳಿಕೊಂಡಿದೆ. ಕೆಜಿಎಫ್ ಚಾಪ್ಟರ್ 1 ಚಿತ್ರವನ್ನು ತೆಲುಗು ಭಾಷೆಯಲ್ಲಿ ವರಾಹಿ ಸಂಸ್ಥೆ ಬಿಡುಗಡೆ ಮಾಡಿತ್ತು. ಇದೀಗ, ಚಾಪ್ಟರ್ 2ರಿಂದ ವರಾಹಿ ಸಂಸ್ಥೆ ಹಿಂದೆ ಸರಿದಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾದ ತೆಲುಗು ಡಬ್ಬಿಂಗ್ ರೈಟ್ಸ್ ಬರೋಬ್ಬರಿ 65 ಕೋಟಿ ರೂಪಾಯಿಗೆ ಸೇಲ್ ಆಗಿದ್ಯಂತೆ. ಅಂದ್ಹಾಗೆ ಸಿನಿಮಾದ ಡಬ್ಬಿಂಗ್ ರೈಟ್ಸ್ ಗೆ 75 ಕೋಟಿ ರೂಪಾಯಿಗೆ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಕೊನೆಗೆ 65 ಕೋಟಿ ರೂಪಾಯಿಗೆ ಸೇಲ್ ಮಾಡಲು ಮೇಕರ್ಸ್ ಒಪ್ಪಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಕೆಜಿಎಫ್ ಚಾಪ್ಟರ್ 2 ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಲಿದೆ. ಜುಲೈ 16 ರಂದು KGF ಚಾಪ್ಟರ್ 2 ವಿಶ್ವಾದ್ಯಂತ ತೆರೆಕಾಣಲಿದೆ. ಈಗಾಗಲೇ ಭಾರಿ ಮೊತ್ತಕ್ಕೆ ಹಿಂದಿ ವಿತರಣೆ ಹಕ್ಕು ಸಹ ಮಾರಾಟ ಆಗಿದೆ.
ಕೆಜಿಎಫ್ ಚಾಪ್ಟರ್ 1 ಸಿನಿಮಾದ ತೆಲುಗು ವಿತರಣೆ ಹಕ್ಕು ಕೇವಲ 5 ಕೋಟಿಗೆ ಮಾರಾಟವಾಗಿತ್ತು. ತೆಲುಗು ವರ್ಷನ್ ನಿಂದ ಸುಮಾರು 20 ಕೋಟಿ ಗಳಿಕೆ ಕಂಡಿತ್ತು ಎನ್ನಲಾಗಿದೆ. ಆದರೆ , ಕೆಜಿಎಫ್ ಮೇಲಿನ ನಿರೀಕ್ಷೆ ಹೆಚ್ಚಾಗಿರುವುದರಿಂದ ಚಿತ್ರತಂಡ ಬೇಡಿಕೆ ಹೆಚ್ಚಿಸಿದೆ. ಜೊತೆಗೆ ಇತ್ತೀಚೆಗೆ ರಿಲೀಸ್ ಆಗಿದ್ದ ಕೆಜಿಎಫ್ 2 ಟೀಸರ್ ವಿಶ್ವಾದ್ಯಂತ ಸೌಂಡ್ ಮಾಡಿದೆ. ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ವೀವ್ಸ್, ಲೈಕ್ಸ್ ಪಡೆಯೋ ಮೂಲಕ ವಿಶ್ವದಾಖಲೆ ಮಾಡಿದೆ. ಹಲವಾರು ರೆಕಾರ್ಡ್ ಗಳನ್ನ ಧೂಳಿಪಟ ಮಾಡಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಸಿನಿಮಾ ಮೇಲಿನ ನಿರೀಕ್ಷೆಯೂ ಹೆಚ್ಚಾಗಿದ್ದು, ಡಬ್ಬಿಂಗ್ ರೈಟ್ಸ್ ಗೂ ಡಿಮ್ಯಾಂಡ್ ಹೆಚ್ಚಾಗಿದೆ. ಹೀಗಾಗಿಯೇ ಸಿನಿಮಾತಂಡ ದೊಡ್ಡ ಮೊತ್ತಕ್ಕೆ ಡಬ್ಬಿಂಗ್ ಹಕ್ಕು ಮಾರಾಟ ಮಾಡಿದೆ ಎನ್ನಲಾಗಿದೆ. ಸಿನಿಮಾದಲ್ಲಿ ಯಶ್ ಜೊತೆ, ಶ್ರೀನಿಧಿ ಶೆಟ್ಟಿ , ಪ್ರಕಾಶ್ ರಾಜ್, ರವೀನಾ ತಂಡನ್, ಸಂಜಯ್ ದತ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.