ದಾವಣಗೆರೆ: ನ್ಯಾಮತಿಯ ಬ್ಯಾಂಕ್ ನಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಎಸ್ ಬಿಐ ಬ್ಯಾಂಕ್ ನಲ್ಲಿದ್ದ 12.95 ಕೋಟಿ ರೂ. ಮೌಲ್ಯದ 17.705 ಕೆಜಿ ಚಿನ್ನಾಭರಣವನ್ನು (Gold) ಕಳ್ಳರು ಹೊತ್ತೊಯ್ದಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಸುನೀಲ್ ಕುಮಾರ್ ಯಾದವ್ ದೂರು ನೀಡಿದ್ದಾರೆ.
ನಗರದ ನೆಹರು ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಶಾಖೆಯಲ್ಲಿ ಕಿಟಕಿ ಸರಳುಗಳನ್ನು ಮುರಿದು ಲಾಕರ್ ನಲ್ಲಿದ್ದ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಕಳ್ಳರು ಈ ಕೃತ್ಯ ಎಸಗಿರುವ ಬಗ್ಗೆ ನ್ಯಾಮತಿ ಪೊಲೀಸರು (Police) ಶಂಕೆ ವ್ಯಕ್ತಪಡಿಸಿದ್ದಾರೆ. ಶನಿವಾರ ಹಾಗೂ ಭಾನುವಾರ ಎರಡು ದಿನ ಬ್ಯಾಂಕ್ ರಜೆ ಇದ್ದ ಕಾರಣ ಶುಕ್ರವಾರ ರಾತ್ರಿ ಕಳ್ಳರು ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಖದೀಮರು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ. ಅಲ್ಲದೇ ಶ್ವಾನದಳದ ಶ್ವಾನಗಳಿಗೆ ವಾಸನೆ ಗ್ರಹಿಸಲು ಸಾಧ್ಯವಾಗದಂತೆ ಬ್ಯಾಂಕ್‌ನ ಒಳಗಡೆ ಖಾರದ ಪುಡಿ ಎರಚಿದ್ದಾರೆ. ಕಳ್ಳರನ್ನು ಹಿಡಿಯಲು ಎಎಸ್ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.