ಬೆಂಗಳೂರು: ಖದೀಮನೊಬ್ಬ ಕದ್ದ ಚಿನ್ನಾಭರಣವನ್ನು ಕೊಳಚೆಯಲ್ಲಿ ಬಚ್ಚಿಟ್ಟಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈತ ಚಿನ್ನ (Gold) ದೋಚುತ್ತಿದ್ದ (Theft). ಸದ್ಯ ಈತನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.
ಸೆಲೆಬ್ರಿಟಿ ಮನೆಗಳ್ಳ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ (Escape Karthik) ಬಂಧಿತ ಆರೋಪಿ. ಆರೋಪಿತನಿಂದ 1 ಕೆಜಿ 200 ಗ್ರಾಂ ಕದ್ದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯ ವಿರುದ್ಧ ಬೆಂಗಳೂರಿನಲ್ಲಿ 83ಕ್ಕೂ ಅಧಿಕ ಮನೆಗಳ್ಳತನ ನಡೆದಿವೆ. ಇಷ್ಟೇ ಅಲ್ಲದೇ, ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಈತನ ವಿರುದ್ಧ ಆರೋಪ ಕೇಳಿ ಬಂದಿದೆ.
ಎಸ್ಕೇಪ್ ಕಾರ್ತಿಕ್ ಮನೆಯೊಂದರಲ್ಲಿ ಮುಕ್ಕಾಲು ಕೆಜಿ ಚಿನ್ನವನ್ನು ಕದ್ದು ತನ್ನ ಗರ್ಲ್‌ಫ್ರೆಂಡ್ ಜೊತೆ ಗೋವಾದ ಕ್ಯಸಿನೋಗೆ ತೆರಳುತ್ತಿದ್ದ. ರೈಲು ತಡವಾಗಿದ್ದರಿಂದಾಗಿ ಕದ್ದಿದ್ದ ಚಿನ್ನವನ್ನು ಅಡವಿಡಲಾಗದೆ ಕೊಳಚೆ ಪ್ರದೇಶದಲ್ಲಿ ಹೂತಿಟ್ಟು ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ. ಓಕಳಿಪುರಂನಲ್ಲಿ ರೈಲ್ವೆ ಕಾಲೋನಿಯಲ್ಲಿ ಮೂತ್ರ ವಿಸರ್ಜನೆಗೆ ತೆರಳಿ ಯಾರೂ ಓಡಾಡದ ಕೊಳಚೆ ಜಾಗದಲ್ಲಿ 2 ಅಡಿ ಗುಂಡಿ ತೆಗೆದು ಕದ್ದ ಚಿನ್ನ ಹೂತಿಟ್ಟಿದ್ದ. ನಂತರ ಅದರ ಮೇಲೆ ಕಲ್ಲು ಇಟ್ಟು, ಪರಾರಿಯಾಗಿದ್ದ.
ಆನಂತರ ಪೊಲೀಸರ ಅತಿಥಿಯಾಗಿ ಮುಕ್ಕಾಲು ಕೆಜಿ ಚಿನ್ನವನ್ನು ಮಣ್ಣಿನಿಂದ ಹೊರಗೆ ತೆಗೆದು ಗೋವಿಂದರಾಜನಗರ ಪೊಲೀಸರ ಕೈಗೆ ನೀಡಿದ್ದಾನೆ. ಆರೋಪಿ ಹತ್ತಿರವಿದ್ದ 70 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.