ಮೈಸೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ರಾಜಕೀಯ ಪ್ರಭಾವ ಬಳಸಿ ಪಿಯುಸಿ ಫೇಲಾದ ಮಗ ಪ್ರಿಯಾಂಕ್ ಖರ್ಗೆಗೆ ರಾಜ್ಯದ ಪ್ರತಿಷ್ಠಿತ ಐಟಿ-ಬಿಟಿ ಖಾತೆ ಕೊಡಿಸುವ ಮೂಲಕ ಸಿಲಿಕಾನ್ ಸಿಟಿ ಬೆಂಗಳೂರಿನ ಗೌರವವನ್ನು ಮಣ್ಣುಪಾಲು ಮಾಡಿದ್ದಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆಡಳಿತ ವೈಖರಿ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಕೇವಲ ಕುಟುಂಬ ರಾಜಕಾರಣದಿಂದ ಮಹತ್ವದ ಖಾತೆ ಪಡೆದಿರುವ ಪ್ರಿಯಾಂಕ್ ಖರ್ಗೆಯವರಿಂದ ರಾಜ್ಯಕ್ಕೆ ಯಾವುದೇ ಲಾಭವಾಗಿಲ್ಲ, ಬದಲಾಗಿ ನಷ್ಟವೇ ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಾಧನೆ ಶೂನ್ಯ, ಅಧಿಕಾರ ಮಾತ್ರ ಜೋರು
ಪ್ರತಾಪ್ ಸಿಂಹ ಅವರು, “ತಂದೆಯ ಹೆಸರಿನಿಂದ ಪ್ರಿಯಾಂಕ್ ಖರ್ಗೆ ಎರಡು ಖಾತೆಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಆದರೆ, ಕಳೆದ ಎರಡೂವರೆ ವರ್ಷಗಳಲ್ಲಿ ಐಟಿ-ಬಿಟಿ ಸಚಿವರಾಗಿ ಅವರು ಮಾಡಿದ ಒಂದೇ ಒಂದು ಸಾಧನೆಯನ್ನು ಹೇಳಲಿ. ಪಿಯುಸಿಯಲ್ಲಿ ಅನುತ್ತೀರ್ಣರಾದರೂ ಅವರ ತಂದೆ ಮಲ್ಲಿಕಾರ್ಜುನ ಖರ್ಗೆಯವರು ಅವರಿಗೆ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿ, ಈಗ ಪ್ರಭಾವಿ ಸಚಿವ ಸ್ಥಾನವನ್ನೂ ಕೊಡಿಸಿದ್ದಾರೆ. ಇದು ಪ್ರಜಾಪ್ರಭುತ್ವದ ದುರಂತ” ಎಂದು ವ್ಯಂಗ್ಯವಾಡಿದರು.
‘ಎಐ ಹಬ್’ ಆಂಧ್ರಕ್ಕೆ ಹೋಗಿದ್ದೇಕೆ? ಕಮಿಷನ್ ಕೇಳಿದ್ರಾ?
ಬೆಂಗಳೂರಿಗೆ ಬರಬೇಕಿದ್ದ ಮಹತ್ವದ ‘ಎಐ ಹಬ್’ ಯೋಜನೆ ಮತ್ತು ಇತರ ಕಂಪನಿಗಳು ನೆರೆಯ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಂಡಿರುವುದರ ಹಿಂದೆ ಸಚಿವರ ವೈಫಲ್ಯವಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು. “ಕರ್ನಾಟಕವನ್ನು ಬಿಟ್ಟು ಕಂಪನಿಗಳು ಆಂಧ್ರಕ್ಕೆ ಏಕೆ ಹೋದವು? ಆ ಕಂಪನಿಗಳ ಮುಖ್ಯಸ್ಥರ ಬಳಿ ಸಚಿವ ಪ್ರಿಯಾಂಕ್ ಖರ್ಗೆ ಏನಾದರೂ ‘ಖರ್ಚಿಗೆ ಹಣ’ ಕೇಳಿದ್ರಾ? ಎಂಬ ಅನುಮಾನ ಮೂಡುತ್ತಿದೆ. ರಾಜ್ಯದಲ್ಲೇ ಮೈಸೂರು ಅಥವಾ ಕಲಬುರ್ಗಿಯಲ್ಲಿ ಎಐ ಹಬ್ ಸ್ಥಾಪನೆಗೆ ಸರ್ಕಾರ ಉಚಿತವಾಗಿ ಜಾಗ ಕೊಡಬಹುದಿತ್ತು. ಆದರೆ, ಅಂತಹ ಇಚ್ಛಾಶಕ್ತಿ ಸಚಿವರಿಗೆ ಇಲ್ಲ. ಅನರ್ಹರಿಗೆ ಖಾತೆ ಕೊಟ್ಟು ಇಡೀ ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭೀಮ ಆರ್ಮಿ ಕಟ್ಟುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ
ಸಚಿವ ಪ್ರಿಯಾಂಕ್ ಖರ್ಗೆಯವರ ‘ಭೀಮ ಆರ್ಮಿ’ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪ್ ಸಿಂಹ, “ಮೊದಲು ಕಾಂಗ್ರೆಸ್ ಪಕ್ಷಕ್ಕೆ ಭೀಮ ಆರ್ಮಿ ಕಟ್ಟುವ ನೈತಿಕತೆ ಇದೆಯೇ ಎಂದು ನೋಡಿಕೊಳ್ಳಲಿ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನೇ ಚುನಾವಣೆಯಲ್ಲಿ ಸೋಲಿಸಿದ ಇತಿಹಾಸವಿರುವ ಕಾಂಗ್ರೆಸ್‌ಗೆ ಇದರ ಬಗ್ಗೆ ಮಾತನಾಡುವ ಹಕ್ಕಿಲ್ಲ. ಅಷ್ಟಕ್ಕೂ, ನೆಹರು ಅವರ ಮರಿ ಮಗಳ ಹೆಸರು ಹೊತ್ತಿರುವ ಪ್ರಿಯಾಂಕ ಖರ್ಗೆಗೆ ಭೀಮ ಆರ್ಮಿ ಕಟ್ಟುವ ಯೋಗ್ಯತೆ ಇದೆಯೇ?” ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರದಲ್ಲಿ ಹೇಳುವವರು ಕೇಳುವವರಿಲ್ಲ
ರಾಜ್ಯ ಸರ್ಕಾರದ ಆಂತರಿಕ ಗೊಂದಲಗಳ ಬಗ್ಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ‘ನವೆಂಬರ್ ಕ್ರಾಂತಿ’ಯ ಭೀತಿಯಿದ್ದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಕುರ್ಚಿ ಸಿಗುವುದೋ ಇಲ್ಲವೋ ಎಂಬ ತಳಮಳವಿದೆ. ಈ ಅಧಿಕಾರದ ಕಿತ್ತಾಟದಲ್ಲಿ ರಾಜ್ಯದ ಆಡಳಿತ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ” ಎಂದು ಟೀಕಿಸಿದರು.








