ಪ್ರೆಸ್ ಮೀಟ್ ನಲ್ಲಿ `ದಾದಾ ವಿರುದ್ಧ ಕೊಹ್ಲಿ ಬಾಂಬ್‘ kohli saakshatv
ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಬುಸುಗುಟ್ಟಿದ್ದಾರೆ. ನಾಯಕತ್ವದಿಂದ ವಜಾ ಮಾಡುವ ಬಗ್ಗೆ ನನ್ನ ಜೊತೆ ಗಂಗೂಲಿ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದು ಗರಂ ಆಗಿದ್ದಾರೆ.
ಟಿ 20 ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ ಅವರನ್ನು ಇತ್ತೀಚೆಗೆ ಏಕದಿನ ಕ್ಯಾಪ್ಟನ್ಸಿಯಿಂದ ವಜಾ ಮಾಡಲಾಯಿತು. ಬಿಸಿಸಿಐನ ಈ ಸಡನ್ ನಿರ್ಧಾರದಿಂದ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಏಕದಿನ ಕ್ರಿಕೆಟ್ ನ ನಾಯಕನಾಗಿ ವಿರಾಟ್ ಮುಂದುವರೆಯುತ್ತೇನೆ ಎಂದು ಹೇಳಿದರೂ ಬಿಸಿಸಿಐ ಅವರನ್ನ ವಜಾಗೊಳಿಸಿದ್ದು ಯಾಕೆ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಆದ್ರೆ ಈ ಬಗ್ಗೆ ವಿರಾಟ್ ಕೊಹ್ಲಿ ಎಲ್ಲೂ ತುಟಿ ಬಿಚ್ಚಿರಲಿಲ್ಲ.
ಈ ಮಧ್ಯೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟಿ 20 ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್ ಬಳಿ ಕೋರಿದ್ದೆ. ಆದರೇ ಅವರು ನನ್ನ ಮಾತು ಕೇಳಿಲ್ಲ ಎಂದು ಹೇಳಿದ್ದರು. ಗಂಗೂಲಿಯ ಈ ಹೇಳಿಕೆಯನ್ನು ಇದೀಗ ವಿರಾಟ್ ಕೊಹ್ಲಿ ಅಲ್ಲಗೆಳೆದಿದ್ದಾರೆ. ಟಿ 20 ಕ್ಯಾಪ್ಟನ್ಸಿಯನ್ನು ಬಿಡಬೇಡ ಎಂದು ನನಗೆ ಯಾರು ಹೇಳಿಲ್ಲ. ಬಿಸಿಸಿಐ ಅಧ್ಯಕ್ಷರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಏಕದಿನ ನಾಯಕತ್ವದಿಂದ ವಜಾಗೊಳಿಸುವ ಬಗ್ಗೆ ವಿರಾಟ್ ಬಳಿ ಚರ್ಚಿಸಲಾಗಿತ್ತು ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಅವರು, ವಂಡೇ ಕ್ಯಾಪ್ಟನ್ಸಿ ಬದಲಾವಣೆ ಬಗ್ಗೆ ನನ್ನ ಜೊತೆ ಯಾರೂ ಚರ್ಚೆ ಮಾಡಿರಲಿಲ್ಲ. ಸೆಲೆಕ್ಷನ್ ಕಮಿಟಿ ಸಭೆಗೂ ಮುನ್ನ ನನಗೆ ಸಮಾಚಾರ ತಿಳಿಸಿದರು. ಟೆಸ್ಟ್ ತಂಡದ ಬಗ್ಗೆ ಮುಖ್ಯ ಆಯ್ಕೆಗಾರರು ನನ್ನ ಜೊತೆ ಚರ್ಚಿಸಿದರು. ಸಭೆ ಬಳಿಕ ನನ್ನನ್ನು ಕರೆದು ನೀನಿನ್ನೂ ಏಕದಿನ ಕ್ರಿಕೆಟ್ ನಾಯಕನಾಗಿರುವುದಿಲ್ಲ ಎಂದರಷ್ಟೆ ಎಂದು ವಿರಾಟ್ ಕೊಹ್ಲಿ ವಿವರಿಸಿದ್ದಾರೆ.