ನವದೆಹಲಿ: ವಿರಾಟ್ ಕೊಹ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಒಂದೇ ತಂಡದ ಪರವಾಗಿ ಆಡುತ್ತಿದ್ದಾರೆ. 2013ರ ರಿಂದ 2021ರ ಅವಧಿಯಲ್ಲಿ 9 ಋತುಗಳಲ್ಲಿ ಆರ್ಸಿಬಿ ತಂಡಕ್ಕೆ ಅವರು ನಾಯಕರೂ ಆಗಿದ್ದರು. ಆದರೆ, ನಾಯಕನಾಗಿ ಅವರು ಟ್ರೋಫಿ ಗೆಲ್ಲಲು ವಿಫಲರಾಗಿದ್ದಾರೆ. ಆದರೆ, ಆರ್ಸಿಬಿ ಹಾಗೂ ಐಪಿಎಲ್ನ ಅರಂಭಿಕ ದಿನಗಳಲ್ಲಿ ಬೇರೆ ತಂಡವನ್ನು ಸೇರುವ ಮನಸ್ಸು ಮಾಡಿದ್ದೆ ಎಂದು ಸ್ವತಃ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅಗ್ರಕ್ರಮಾಂಕದಲ್ಲಿ ಆಡುವ ಅವಕಾಶ ಬೇಕಿದ್ದ ಕಾರಣಕ್ಕೆ ಬೇರೆ ಫ್ರಾಂಚೈಸಿಯಲ್ಲಿ ವಿರಾಟ್ ಕೊಹ್ಲಿ ಅವಕಾಶ ಕೇಳಿದ್ದರಂತೆ. ಆರ್ಸಿಬಿಯ ಆರಂಭಿಕ ದಿನಗಳಲ್ಲಿ ವಿರಾಟ್ ಕೊಹ್ಲಿ 5 ಹಾಗೂ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅಗ್ರಕ್ರಮಾಂಕದಲ್ಲಿ ಆಡುವ ಅವಕಾಶ ಸಿಗುವ ನಿಟ್ಟಿನಲ್ಲಿ ಬೇರೆ ಫ್ರಾಂಚೈಸಿಯ ಮಾತನಾಡಿದರೂ ಅವರು ನನಗೆ ಅವಕಾಶ ನೀಡಲು ನಿರಾಕರಿಸಿದರು ಎಂದು ಹೇಳಿದ್ದಾರೆ.
ಆದರೆ, 2011ರ ಐಪಿಎಲ್ ರಿಟೆನ್ಷನ್ಗೂ ಮುನ್ನ ಇದೇ ಫ್ರಾಂಚೈಸಿ ಮತ್ತೊಮ್ಮೆ ಕೊಹ್ಲಿ ಬಳಿ ಇದೇ ವಿಚಾರವಾಗಿ ಮಾತನಾಡಿತ್ತು. ತಂಡಕ್ಕೆ ಸೇರುವ ಆಹ್ವಾನವನ್ನೂ ನೀಡಿತ್ತು. ಆದರೆ, ಅದಾಗಲೇ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿದ್ದ ವಿರಾಟ್ ಕೊಹ್ಲಿ, ತನ್ನನ್ನು ಅಪಾರವಾಗಿ ಬೆಂಬಲಿಸಿದ್ದ ಆರ್ಸಿಬಿ ತಂಡದ ಜೊತೆಯಲ್ಲಿಯೇ ಉಳಿಯುವ ತೀರ್ಮಾನ ಮಾಡಿದ್ದರು. ತಂಡದ ಕೋಚ್ ಆಗಿದ್ದ ರೇ ಜೆನ್ನಿಂಗ್ಸ್ಗೆ ನಾನು ಹೇಳಿದ್ದು ಒಂದೇ ಮಾತು. ನನಗೆ ಟಾಪ್ ಆರ್ಡರ್ನಲ್ಲಿ ಅವಕಾಶ ನೀಡಿ. ನಾನು ಭಾರತ ತಂಡಕ್ಕೆ ಮೂರನೇ ಕ್ರಮಾಂಕದಲ್ಲಿ ಆಟವಾಡುತ್ತೇನೆ. ಇಲ್ಲಿಯೂ ಕೂಡ ಅದೇ ಕ್ರಮಾಂಕದಲ್ಲಿ ಆಡಲು ಬಯಸುತ್ತೇನೆ ಎಂದು ಹೇಳಿದ್ದೆ.
ಅದಕ್ಕೆ ಅವರು, ಸರಿ ಹಾಗಿದ್ದರೆ ನೀನು ಮೂರನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮಾಡು ಎಂದಿದ್ದರು ಎಂದು ರಾಬಿನ್ ಉತ್ತಪ್ಪ ಜೊತೆಗಿನ ಸಂದರ್ಶನದಲ್ಲಿ ಕೊಹ್ಲಿ ಹೇಳಿದ್ದಾರೆ. ನಾನು ಇಂದು ಆ ಫ್ರಾಂಚೈಸಿಯ ಹೆಸರು ಹೇಳೋದಿಲ್ಲ. ಆದರೆ, ಅಂದು ಈ ಫ್ರಾಂಚೈಸಿ ಜತೆ ನಾನು ಮಾತನಾಡಿದ್ದೆ. ಆದರೆ, ನನ್ನ ಮಾತನ್ನು ಅವರು ಕೇಳುವ ಮನಸ್ಸೂ ಕೂಡ ಮಾಡಲಿಲ್ಲ ಎಂದು ಹೇಳಿದ್ದಾರೆ.