ಕೋಲ್ಕತ್ತಾದ ಆರ್‌ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ.
2024ರ ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ವೈದ್ಯೆಯ ರಕ್ತಸಿಕ್ತ ಮೃತದೇಹ ಪತ್ತೆಯಾಗಿತ್ತು. ಕೊಲೆಯ ಮರುದಿನವೇ ಆಸ್ಪತ್ರೆಯ ನಾಗರಿಕ ಸ್ವಯಂಸೇವಕನಾಗಿದ್ದ 33 ವರ್ಷದ ಸಂಜಯ್ ರಾಯ್ ಅನ್ನು ಬಂಧಿಸಲಾಗಿತ್ತು.
ಕೋಲ್ಕತ್ತಾದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅನಿರ್ಬನ್ ದಾಸ್ ಅವರು ನವೆಂಬರ್ 11 ರಂದು ಪ್ರಕರಣದ ವಿಚಾರಣೆ ಆರಂಭಿಸಿ, 50ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆ ದಾಖಲಿಸಿದರು.
ಕೇವಲ 57 ದಿನಗಳ ವಿಚಾರಣೆಯ ನಂತರ ರಾಯ್ ದೋಷಿ ಎಂದು ತೀರ್ಪು ನೀಡಲಾಗಿದೆ. ಶಿಕ್ಷೆಯ ಪ್ರಮಾಣವನ್ನು ಜನವರಿ 20, 2025 ರಂದು ಪ್ರಕಟಿಸಲಾಗುವುದು. ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಈ ಘಟನೆಯು ದೇಶಾದ್ಯಂತ ಭಾರಿ ಆಕ್ರೋಶ ಮತ್ತು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.








