ಕುಮಾರಸ್ವಾಮಿ ಅವರೇ ಜೆಡಿಎಸ್ ವೆಬ್ಸೈಟ್ನಲ್ಲಿ ರಾಜ್ಯಾಧ್ಯಕ್ಷರ ಫೋಟೋಗೆ ಜಾಗವಿಲ್ಲ : ಬಿಜೆಪಿ ವ್ಯಂಗ್ಯ
ಬೆಂಗಳೂರು : ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಅವರೇ, ನಿಮ್ಮ ಪಕ್ಷದ ಅಧಿಕೃತ ವೆಬ್ಸೈಟ್ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವಚಿತ್ರಕ್ಕೇ ಜಾಗವಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿದೆ.
ಕುಟುಂಬ ರಾಜಕಾರಣದ ವಿರಾಟ ದರ್ಶನವಾಗುತ್ತಿರುವುದೇ ಬಿಜೆಪಿಯಲ್ಲಿ ಎಂಬ ಹೆಚ್ ಡಿಕೆ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಬಿಜೆಪಿ ತಿರುಗೇಟು ನೀಡಿದೆ.
ಬಿಜೆಪಿ ಟ್ವೀಟ್ ನಲ್ಲಿ…
ಕುಮಾರಸ್ವಾಮಿ ಅವರೇ, ಜಾತ್ಯತೀತ ಜನತಾ ದಳ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಯಾರ ಕುಟುಂಬಕ್ಕೆ ನೀಡಿದ್ದೀರಿ? ರಾಜ್ಯ ಅಧ್ಯಕ್ಷ ಸ್ಥಾನದಲ್ಲಿ ಸುದೀರ್ಘ ಅವಧಿಗೆ ಇದ್ದಿದ್ದು ಯಾರ ಕುಟುಂಬ?
ಕುಮಾರಸ್ವಾಮಿ ಅವರೇ, ಜೆಡಿಎಸ್ಗೆ ಅಧಿಕಾರ ಸಿಗುತ್ತದೆ ಎಂದು ಸ್ಪಷ್ಟವಾದ ಕ್ಷಣದಿಂದ ನಿಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ನೀವೇ ಯಾಕೆ ಆಯ್ಕೆಯಾಗುತ್ತೀರಿ? ಪಕ್ಷಕ್ಕಾಗಿ ದುಡಿಮೆ ಮಾಡಿದವರಿಗೆ ಸ್ವಲ್ಪ ಅವಕಾಶ ಕೊಡಬಹುದಲ್ಲವೇ!!?
ಮಾನ್ಯ ಹೆಚ್ ಡಿ ಕುಮಾರಸ್ವಾಮಿ ಅವರೇ, ನಿಮ್ಮ ಪಕ್ಷದ ಅಧಿಕೃತ ವೆಬ್ಸೈಟ್ನಲ್ಲಿ ಪಕ್ಷದ ಹಾಲಿ ರಾಜ್ಯಾಧ್ಯಕ್ಷರ ಭಾವಚಿತ್ರಕ್ಕೇ ಜಾಗವಿಲ್ಲ. ಅವರು ನಿಮ್ಮ ಕುಟುಂಬದವರಲ್ಲ ಎಂಬ ಕಾರಣಕ್ಕಾಗಿ ಈ ದ್ವೇಷವೇ? ಇದೂ ಕುಟುಂಬ ರಾಜಕಾರಣದ ಭಾಗವೇ ಎಂದು ಕುಟುಕಿದೆ.