ಹಾಸನ: ಕಾಡಾನೆ ದಾಳಿಗೆ (Elephant Attack) ಕೂಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಬೇಲೂರಿನ ಅಂಕಿಹಳ್ಳಿಯಲ್ಲಿ ನಡೆದಿದೆ.
ಮೃತನನ್ನು ಪಶ್ಚಿಮ ಬಂಗಾಳದ (West Bengal) ದೀಪಕ್ ರಾಯ್ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ಕಾರ್ಮಿಕನ ಕುಟುಂಬಸ್ಥರು ಪಶ್ಚಿಮ ಬಂಗಾಳದಿಂದ ಆಗಮಿಸಬೇಕಿದೆ. ಕಾರ್ಮಿಕನು ದಿನಸಿ ಅಂಗಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಎದೆ ಹಾಗೂ ತಲೆ ಭಾಗವನ್ನು ತುಳಿದಿದೆ. ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ನಾಲ್ಕು ದಿನಗಳ ಹಿಂದೆ ಕೂಡ ಕಾಡಾನೆಯೊಂದು ಕಾರನ್ನು ಅಡ್ಡ ಹಾಕಿ ಅದರಲ್ಲಿದ್ದ ವಿದ್ಯಾರ್ಥಿನಿಯನ್ನು ಹೊರಗೆಳೆದು ತುಳಿದಿತ್ತು. ಘಟನೆಯಲ್ಲಿ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಳು.








