ಕಂಟೇನರ್ ಗೆ ಲಾರಿ ಡಿಕ್ಕಿ : ಲಕ್ಷಾಂತರ ಮೊಟ್ಟೆಗಳು ರಸ್ತೆಪಾಲು
ಹುಬ್ಬಳ್ಳಿ : ಕೋಳಿ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಕಂಟೇನರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ನಲ್ಲಿದ್ದ ಮೊಟ್ಟೆಗಳು ರಸ್ತೆ ಪಾಲಾಗಿರುವ ಘಟನೆ ಹುಬ್ಬಳ್ಳಿಯ ಹೊರವಲಯದಲ್ಲಿ ನಡೆದಿದೆ.
ಹುಬ್ಬಳ್ಳಿ ಹೊರವಲಯದ ಐಟಿಸಿ ಗೋಡೌನ್ ಬಳಿ ನಸುಕಿನ ಜಾವ ಸಂಭವಿಸಿದ್ದು, ನಿಂತಿದ್ದ ಕಂಟೇನರ್ ಗೆ ಅದಿರು ತುಂಬಿಕೊಂಡು ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ವಾಹನ ಉರುಳಿ ಬಿದ್ದಿದ್ದು, ಕಂಟೇನರನಲ್ಲಿದ್ದ ಮೊಟ್ಟೆಗಳು ರಸ್ತೆ ಪಾಲಾಗಿವೆ.
ಈ ಅಪಘಾತದಲ್ಲಿ ಮೊಟ್ಟೆ ಸಾಗಿಸುತ್ತಿದ್ದ ಕಂಟೇನರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಈ ಅಪಘಾತದಿಂದ ರಸ್ತೆ ಮೊಟ್ಟಗಳ ಮಯವಾಗಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು , ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿದ್ದಾರೆ. ಅಲ್ಲದೆ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.