ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಅವರ ಜ್ಞಾನವಿಲ್ಲದ ಮಾತುಗಳಿಂದಾಗಿ ಇಡೀ ದೇಶ ಹಾಗೂ ರಾಜ್ಯದ ಜನರು ನಮ್ಮ ಕ್ಷೇತ್ರದತ್ತ ನೋಡಿ ನಗುವಂತಾಗಿದೆ. ಇದರಿಂದ ನಮ್ಮ ಕ್ಷೇತ್ರ ನಗೆಪಾಟಲಿಗೀಡಾಗುತ್ತಿದೆ ಎಂದು ಸಂಸದ ಡಾ. ಕೆ. ಸುಧಾಕರ್ ಅವರು ಹೆಸರು ಹೇಳದೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರ ನಡವಳಿಕೆಯಿಂದ ಕ್ಷೇತ್ರದ ಗೌರವಕ್ಕೆ ಧಕ್ಕೆಯಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸೋಶಿಯಲ್ ಮೀಡಿಯಾ ನೋಡಿ ಜ್ಞಾನೋದಯ ಮಾಡಿಕೊಳ್ಳಲಿ
“ಕೆಲವರಿಗೆ ದೇಶದಲ್ಲಿ ಏನು ನಡೆಯುತ್ತಿದೆ ಎಂಬ ಕನಿಷ್ಠ ಜ್ಞಾನವೂ ಇಲ್ಲ. ಮಾಹಿತಿ ಇಲ್ಲದೆ ಉಡಾಫೆ ಮಾತುಗಳನ್ನಾಡುವುದನ್ನು ನಿಲ್ಲಿಸಬೇಕು. ಕನಿಷ್ಠಪಕ್ಷ ತಮ್ಮ ಬಗ್ಗೆ ಬರುವ ಸೋಶಿಯಲ್ ಮೀಡಿಯಾ ಕಾಮೆಂಟ್‌ಗಳನ್ನಾದರೂ ಓದಿದರೆ ಅವರಿಗೆ ಜ್ಞಾನೋದಯ ಆಗಬಹುದು. ಈ ವ್ಯಕ್ತಿಯಿಂದಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವು ರಾಷ್ಟ್ರಮಟ್ಟದಲ್ಲಿ ಹಾಸ್ಯಾಸ್ಪದವಾಗಿದೆ. ನಾನು ಎಲ್ಲಿಗೆ ಹೋದರೂ ಜನರು ನನ್ನನ್ನು ಪ್ರಶ್ನಿಸಿ ನಗುತ್ತಾರೆ,” ಎಂದು ಸುಧಾಕರ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ತಾರತಮ್ಯ ಮಾಡಿಲ್ಲ
ಕರ್ನಾಟಕದಲ್ಲಿನ ಪ್ರವಾಹ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಎರಡು ದಿನಗಳ ಹಿಂದೆಯೇ ಅನುದಾನ ಬಿಡುಗಡೆ ಮಾಡಿದೆ. “ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಾರೆಯೇ ಹೊರತು, ಯಾರದ್ದೋ ಮಾತು ಕೇಳಿ ಕಲಿಯಬೇಕಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಎಂಬ ಕಾರಣಕ್ಕೆ ಯಾವುದೇ ತಾರತಮ್ಯ ಮಾಡಿಲ್ಲ. ಯುಪಿಎ ಸರ್ಕಾರದ ಕಾಲದಲ್ಲಿ ರೈಲ್ವೆ ಯೋಜನೆಗಳಿಗೆ ಸಿಕ್ಕಿದ್ದ ಅನುದಾನಕ್ಕೂ, ನಮ್ಮ ಸರ್ಕಾರದ ಅವಧಿಯಲ್ಲಿ ಸಿಕ್ಕಿದ್ದಕ್ಕೂ ಹೋಲಿಕೆ ಮಾಡಿ ನೋಡಲಿ,” ಎಂದು ಸವಾಲು ಹಾಕಿದರು.
ಹಿಂದೂಗಳ ಕೆರಳಿಸುವಿಕೆ, ಅಲ್ಪಸಂಖ್ಯಾತರ ಓಲೈಕೆ
ಆರ್‌ಎಸ್‌ಎಸ್ ಸಂಘಟನೆಯ ಬಗ್ಗೆ ದಿನೇಶ್ ಗುಂಡೂರಾವ್ ಅವರ ಹೇಳಿಕೆಗಳನ್ನು ಖಂಡಿಸಿದ ಸುಧಾಕರ್, “ಆರ್‌ಎಸ್‌ಎಸ್‌ನವರು ದೇವಲೋಕದಿಂದ ಬಂದವರು ಎಂದು ಎಲ್ಲೂ ಹೇಳಿಲ್ಲ. ಬಹುಸಂಖ್ಯಾತ ಹಿಂದೂಗಳನ್ನು ಕೆರಳಿಸುವ ಕ್ಷುಲ್ಲಕ ಮಾತುಗಳನ್ನು ಕಾಂಗ್ರೆಸ್‌ನವರು ನಿಲ್ಲಿಸಬೇಕು. ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿರುವ ಸಂಘಟನೆಯನ್ನು ನೋಯಿಸಿ ಏನು ಸಾಧಿಸುತ್ತೀರಿ? ಜಾತಿ ಸಮೀಕ್ಷೆ, ಧರ್ಮಸ್ಥಳ, ವೀರಶೈವ-ಲಿಂಗಾಯತ ಸಮುದಾಯ ಹೀಗೆ ಎಲ್ಲವನ್ನೂ ವಿರೋಧಿಸುತ್ತಾ, ಕೇವಲ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು.
ಬೆಂಗಳೂರು ಬೆಳವಣಿಗೆಗೆ ಹಿಂದಿನ ಸರ್ಕಾರಗಳೇ ಕಾರಣ
ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಕಂಪನಿಗಳು ಬರುವುದು ದೂರದ ಮಾತು, ಇರುವ ಕಂಪನಿಗಳನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಉದ್ಯಮಿಗಳಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಕೆಂಪೇಗೌಡರು, ನಾಲ್ವಡಿ ಕೃಷ್ಣರಾಜ ಒಡೆಯರ್, ದೇವೇಗೌಡರು ಹಾಗೂ ಎಸ್.ಎಂ. ಕೃಷ್ಣ ಅವರಂತಹ ನಾಯಕರ ದೂರದೃಷ್ಟಿಯಿಂದ ಬೆಂಗಳೂರು ಬೆಳೆದಿದೆ. ಆ ಹಿಂದಿನ ಇಕೋ-ಸಿಸ್ಟಂ ನೋಡಿ ಇಂದಿಗೂ ಉದ್ಯಮಿಗಳು ಬರುತ್ತಿದ್ದಾರೆಯೇ ಹೊರತು, ಈ ಸರ್ಕಾರದ ಹೊಸ ವ್ಯವಸ್ಥೆಯನ್ನು ನೋಡಿ ಯಾರೂ ಬರುತ್ತಿಲ್ಲ,” ಎಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.








