ಬೆಂಗಳೂರು : ಚುನಾವಣೆ ಪೂರ್ವದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ಸದ್ಯ ಅಧಿಕಾರಕ್ಕೆ ಬಂದ ಮೇಲೆ ಒಂದೊಂದಾಗಿ ಜಾರಿಗೆ ತರುತ್ತಿದೆ. ಜೂನ್ 12 ರಂದು ಶಕ್ತಿ ಯೋಜನೆ ಜಾರಿ ಮಾಡಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಸದ್ಯ ಮತ್ತೆರಡು ಗ್ಯಾರಂಟಿಗಳಾದ ಅನ್ನಭಾಗ್ಯ ಮತ್ತು ಗೃಹಜ್ಯೋತಿ (Gruha Jyothi scheme) ಚಾಲನೆಗೆ ಮುಂದಾಗಿದೆ.
ಜುಲೈ 1 ರಂದೇ ಅನ್ನಭಾಗ್ಯ ಮತ್ತು ಗೃಹಜ್ಯೋತಿ ಗ್ಯಾರಂಟಿಗಳನ್ನ ಈಡೇಸಲಿದ್ದಾರೆ. ಈಗಾಗಲೇ ಜೂನ್ 18ರಿಂದ ಗೃಹಜ್ಯೋತಿಗೆ ಅರ್ಜಿ ಆಹ್ವಾನಿಸಿದ್ದು, ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಗೃಹ ಜ್ಯೋತಿಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, 200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಗ್ರಾಹಕರು ಮುಂದಾಗಿದ್ದಾರೆ. ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನಾಳೆಯಿಂದ (ಜು 01ರ ರಾತ್ರಿ 12 ಗಂಟೆ) ಬಳಸುವ 200 ಯುನಿಟ್ ಒಳಗಿನ ಸರಾಸರಿ ಕರೆಂಟ್‌ಗೆ ಬಿಲ್ ಕಟ್ಟುವಂತಿಲ್ಲ.
ಜುಲೈ ತಿಂಗಳ ವಿದ್ಯುತ್ ಬಿಲ್ ಆಗಸ್ಟ್ ತಿಂಗಳಲ್ಲಿ ಬರಲಿದೆ. ಬರುವ ಕರೆಂಟ್ ಬಿಲ್ ನಲ್ಲಿ ಶಕ್ತಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ಹೆಸರು ಬರುವ ಸಾಧ್ಯತೆ ಇದೆ. 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ಗೃಹಜ್ಯೋತಿಯ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ. 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ. 12 ತಿಂಗಳ ಸರಾಸರಿಯ ಬಿಲ್ನಲ್ಲಿ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಾಗುತ್ತದೆ. ಈಗಾಗಲೇ ಇದಕ್ಕಾಗಿ ಒಟ್ಟು 2.14 ಕೋಟಿಯಷ್ಟು ಜನರು ಅರ್ಜಿ ಹಾಕಿದ್ದಾರೆ.








