ಮಂಡ್ಯ: “ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಇನ್ನು ಎಷ್ಟು ವರ್ಷ ತಾತ ದೇವೇಗೌಡರ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೋ ಗೊತ್ತಿಲ್ಲ. ದೇವೇಗೌಡರ ನೆರಳಿನಿಂದ ಹೊರಬಂದು ಸ್ವಂತ ಶಕ್ತಿಯ ಮೇಲೆ ರಾಜಕಾರಣ ಮಾಡುವುದನ್ನು ಕಲಿಯಲಿ,” ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಜೆಡಿಎಸ್ ನಾಯಕರಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.
ದೇವೇಗೌಡರ ಕುಟುಂಬ ಸಾಕಷ್ಟು ಚುನಾವಣೆಗಳನ್ನು ನೋಡಿದೆ ಎಂಬ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಿಖಿಲ್ ಅವರು ನಮಗೆ ಸರ್ಟಿಫಿಕೇಟ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಾನು ದೇವೇಗೌಡರ ಬಗ್ಗೆ ಎಲ್ಲೂ ಮಾತನಾಡಿಲ್ಲ. ಆದರೂ ಅವರು ಪದೇ ಪದೇ ದೇವೇಗೌಡರ ಹೆಸರನ್ನು ಏಕೆ ಎಳೆದು ತರುತ್ತಾರೆ? ತಮ್ಮಿಂದ ಪಕ್ಷವನ್ನು ಸಮರ್ಥವಾಗಿ ಕಟ್ಟಲು ಆಗುತ್ತಿಲ್ಲ ಎಂಬ ಕಾರಣಕ್ಕೆ ಹಿರಿಯರ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ,” ಎಂದು ಚಲುವರಾಯಸ್ವಾಮಿ ಛೇಡಿಸಿದರು.
ಡಿಸಿಸಿ ಬ್ಯಾಂಕ್ ಹಳೆಯ ಘಟನೆ ಕೆದಕಿದ ಸಚಿವರು
ಹಿಂದಿನ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಡಿಸಿಸಿ ಬ್ಯಾಂಕ್ ಚುನಾವಣೆಯ ಘಟನೆಯನ್ನು ನೆನಪಿಸಿಕೊಂಡ ಸಚಿವರು, “ಅಂದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಅಧಿಕಾರದಲ್ಲಿದ್ದ ಅವರು ನಮ್ಮ ನಾಲ್ವರು ಸದಸ್ಯರನ್ನು ಅನರ್ಹಗೊಳಿಸಿದರು. ಕೇವಲ 24 ಗಂಟೆಗಳಲ್ಲಿ ಸಿ.ಪಿ. ಉಮೇಶ್ ಅವರನ್ನು ನಾಮನಿರ್ದೇಶನದ ಮೂಲಕ ಕರೆತಂದು ಅಧ್ಯಕ್ಷರನ್ನಾಗಿ ಮಾಡಿದರು. ಆಗ ಕೇವಲ 3 ಸ್ಥಾನ ಗೆದ್ದಿದ್ದ ಜೆಡಿಎಸ್ ಆಡಳಿತ ನಡೆಸಿತು. ಆ ಸಮಯದಲ್ಲಿ ಅವರಿಗೆ ಪ್ರಜಾಪ್ರಭುತ್ವ, ಕಾನೂನು ಮತ್ತು ಸಾಮಾಜಿಕ ನ್ಯಾಯ ಎಲ್ಲಿಗೆ ಹೋಗಿತ್ತು? ಈ ಬಗ್ಗೆ ನಿಖಿಲ್ ಮೊದಲು ಅವರ ತಂದೆಗೆ ಬುದ್ಧಿ ಹೇಳಲಿ,” ಎಂದು ಸಲಹೆ ನೀಡಿದರು.
ನಾವು ವಾಮಮಾರ್ಗದ ರಾಜಕೀಯ ಮಾಡುವುದಿಲ್ಲ
ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಮಪತ್ರ ವಾಪಸ್ ಪಡೆಯಲು ನಾವು ಯಾರಿಗೂ ಹೇಳಿಲ್ಲ. ಅವರು ಧೈರ್ಯವಾಗಿ ಚುನಾವಣೆ ಎದುರಿಸಬೇಕಿತ್ತು. “ಪಾಂಡವಪುರದಲ್ಲಿ ನಮಗೆ ಹೆಚ್ಚು ಮತಗಳಿಲ್ಲ, ನಾವು ಗೆಲ್ಲುವುದಿಲ್ಲ ಎಂದು ಗೊತ್ತಿದೆ. ಆದರೂ ಸೋಲುತ್ತೇವೆಂದು ತಿಳಿದಿದ್ದರೂ ರೈತ ಸಂಘದ ಜೊತೆಗೂಡಿ ನಾವು ಹೋರಾಟ ನಡೆಸುತ್ತಿದ್ದೇವೆ. ನಾವು ಎಂದಿಗೂ ವಾಮಮಾರ್ಗದ ರಾಜಕಾರಣ ಮಾಡುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಹಾಸನದಲ್ಲಿ ಜೆಡಿಎಸ್ ಗೆದ್ದಿರುವುದನ್ನು ಉಲ್ಲೇಖಿಸಿ, “ಹಾಸನದಲ್ಲಿ ಜೆಡಿಎಸ್ ಗೆದ್ದಿದೆ. ಹಾಗಾದರೆ ಅವರೂ ವಾಮಮಾರ್ಗ ಅನುಸರಿಸಿ ಗೆದ್ದಿದ್ದಾರೆಯೇ? ಎಚ್.ಡಿ. ರೇವಣ್ಣ ನೇತೃತ್ವದಲ್ಲಿ ಜೆಡಿಎಸ್ ವಾಮಮಾರ್ಗದಿಂದಲೇ ಡಿಸಿಸಿ ಬ್ಯಾಂಕ್ ಅಧಿಕಾರ ಹಿಡಿದಿದೆ ಎಂದು ಹೇಳಿದರೆ ಅವರು ಒಪ್ಪಿಕೊಳ್ಳುತ್ತಾರೆಯೇ?” ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು.
ಮಂಡ್ಯಕ್ಕೆ ಜೆಡಿಎಸ್ ಕೊಡುಗೆ ಏನು?
ಚುನಾವಣೆಯಲ್ಲಿ ಸೋಲು-ಗೆಲುವು ಸಹಜ, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಾನು ಇದುವರೆಗೂ ಯಾರ ವಿರುದ್ಧವೂ ತೊಡೆ ತಟ್ಟಿಲ್ಲ, ಲಘುವಾಗಿಯೂ ಮಾತನಾಡಿಲ್ಲ ಎಂದರು.
“ಹಗಲು-ರಾತ್ರಿ ಎನ್ನದೆ ಮಂಡ್ಯ ಜಿಲ್ಲೆಯ ಜನ ನಮ್ಮ ಅಭಿವೃದ್ಧಿಯನ್ನು ನೋಡದೆಯೂ ಜೆಡಿಎಸ್‌ಗೆ ಮತ ಹಾಕುತ್ತಾರೆ. ಆದರೆ, ಪ್ರತಿಯಾಗಿ ಜೆಡಿಎಸ್ ಪಕ್ಷದ ಕೊಡುಗೆ ಈ ಜಿಲ್ಲೆಗೆ ಏನು? ಆ ಪಕ್ಷದ ನಾಯಕರೆನಿಸಿಕೊಂಡವರು ತಮ್ಮ ಕಾರ್ಯಕರ್ತರ ಪರವಾಗಿಯಾದರೂ ನಿಂತಿದ್ದಾರೆಯೇ?” ಎಂದು ಚಲುವರಾಯಸ್ವಾಮಿ ನೇರವಾಗಿಯೇ ಪ್ರಶ್ನಿಸಿದರು.








