ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಎಲ್ಲರ ಬಗ್ಗೆ ಹಗುರವಾಗಿ ಮಾತನಾಡಿವುದನ್ನು ಬಿಟ್ಟು, ತಾವು ಮಾಡಿದ ಲೂಟಿ ಒಪ್ಪಿಕೊಂಡು ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ (Yediyurappa) ರಾಜಕೀಯ ನಿವೃತ್ತಿಯ ಮಾತನ್ನು ನೀವು ಹಿಂದಕ್ಕೆ ತೆಗೆದುಕೊಳ್ಳಿ. ಈಗ ನಿಮ್ಮ ಲೂಟಿ ಒಪ್ಪಿಕೊಳ್ಳಿ. ಸಾವಿರಾರು ಕೋಟಿ ಲೂಟಿ ಬಗ್ಗೆ ಒಪ್ಪಿಕೊಂಡು ರಾಜೀನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.
ಮುಡಾ ಹಗರಣದಲ್ಲಿ 5 ಸಾವಿರ ಕೋಟಿಯ ಅವ್ಯವಹಾರ ಆಗದಿದ್ದರೆ ನೀವ್ಯಾಕೆ ಸದನದಿಂದ ಓಡಿ ಹೋಗಿದ್ದೀರಿ? ವಿಪಕ್ಷಕ್ಕೆ ಸಿಎಂ ಹಾಗೂ ಡಿಸಿಎಂ ಗೊಡ್ಡು ಬೆದರಿಕೆ ಹಾಕುತ್ತಿದ್ದಾರೆ. ಇದನ್ನು ಬಿಟ್ಟು ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣದ ವಿವರ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ನಮ್ಮ ಹೋರಾಟ ನಿರಂತರವಾಗಿರಲಿದೆ. ನಮ್ಮ ಹೋರಾಟ ಸಿದ್ದರಾಮಯ್ಯ ವಿರುದ್ಧ ಅಲ್ಲ. ಭ್ರಷ್ಟ ಸಿಎಂ ವಿರುದ್ಧ. ಆದರೆ, ನಮ್ಮ ಹೋರಾಟವನ್ನು ನಿಮಗೆ ಹತ್ತಿಕ್ಕಲು ಸಾಧ್ಯವಿಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರ ಕಿತ್ತೆಸೆಯುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ಮನೆ ಬಿದ್ದವರಿಗೆ 5 ಲಕ್ಷ ರೂ. ನೀಡಿತ್ತು. ಆದರೆ, ಈ ಸರ್ಕಾರ ಕೇವಲ 1 ಲಕ್ಷ ರೂ. ನೀಡುತ್ತಿದೆ. ಅಂಗನವಾಡಿ ಕಾರ್ಯಕರ್ತರಿಗೆ 2 ತಿಂಗಳಿಂದ ಗೌರವಧನ ಸಿಕ್ಕಿಲ್ಲ. ಅಂಗವಿಕಲರಿಗೆ 6 ತಿಂಗಳಿಂದ ಮಾಸಾಶನ ಕೊಟ್ಟಿಲ್ಲ.15 ತಿಂಗಳುಗಳಲ್ಲಿ ಯಾವುದೇ ಹೊಸ ಅಭಿವೃದ್ಧಿ ಯೋಜನೆಯನ್ನು ಘೋಷಿಸಿಲ್ಲ. ದರಿದ್ರ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಒಂದೆಡೆ ಭೀಕರ ಬರಗಾಲ. 1,500 ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗುಡುಗಿದ್ದಾರೆ.