ಬೆಂಗಳೂರು: ನಮ್ಮ ಅವಧಿಯಲ್ಲಿ ರೈತರಿಗೆ ನೋಟಿಸ್ ಕೊಟ್ಟಿದ್ದ ಅಧಿಕಾರಿಗಳ ವಿರುದ್ಧ ಕೂಡ ಕ್ರಮ ಜರುಗಿಸಲಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಅನ್ವರ್ ಮಾನ್ಪಾಡಿ ವರದಿಯನ್ನು ಆಧರಿಸಿ ನಾವು ನೋಟಿಸ್ ನೀಡಿದ್ದೇವೆ. ಕಾಂಗ್ರೆಸ್‌ನ (Congress) ದೊಡ್ಡ ದೊಡ್ಡ ನಾಯಕರು, ಕೇಂದ್ರ, ರಾಜ್ಯಗಳ ನಾಯಕರು ವಕ್ಫ್ ಭೂಮಿ ಒತ್ತುವರಿ ಮಾಡಿಕೊಂಡು ಮಾರಾಟ ಮಾಡಿಕೊಂಡಿದ್ದರು. ಆದರೆ, ಈಗ ಕಾಂಗ್ರೆಸ್ ನವರು ರೈತರಿಗೆ ನೋಟಿಸ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಅವಧಿಯಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮವಾಗಲಿ. ನಾವೇನು ಅಧಿಕಾರಿಗಳ ರಕ್ಷಣೆ ಮಾಡುತ್ತಿಲ್ಲ. ನಮ್ಮ ಅವಧಿಯಲ್ಲಿ ಅಥವಾ ಕಾಂಗ್ರೆಸ್ ಅವಧಿಯಲ್ಲಿ ಅಧಿಕಾರಿಗಳು ತಪ್ಪಾಗಿ ವಕ್ಫ್ ನೋಟಿಸ್ ಕೊಟ್ಟಿದ್ದರೆ ಕ್ರಮ ಆಗಲಿ. ಈಗ ಪ್ರಶ್ನೆಯಾಗಿರುವುದು ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಮುಸ್ಲಿಂ ವೋಟುಗಳ ಬಗ್ಗೆ ನಿಖಿಲ್ ಹೇಳಿದ್ದ ಹೇಳಿಕೆಯ ವಿಚಾರವಾಗಿ ಮಾತನಾಡಿದ ಅವರು, ನಿಖಿಲ್ ಮಾತು ಸತ್ಯವಿದೆ. ಬೆರಳೆಣಿಕೆಯಷ್ಟು ಮುಸ್ಲಿಂ ಮತಗಳು ಜೆಡಿಎಸ್‌ಗೆ ಬಂದಿವೆ. ಆ ಸಮುದಾಯ ನಿಖಿಲ್‌ನನ್ನು ಸೋಲಿಸಲು ಮತ ಹಾಕಿಲ್ಲ. ಉಳಿದ ಸಮುದಾಯಗಳೂ ಒಟ್ಟಾಗಿ ಮತ ಚಲಾಯಿಸಿಲ್ಲ ಎಂದಿದ್ದಾರೆ.







