ಲಿಂಗಾಯತ ಧರ್ಮದ ಹೋರಾಟ ನಾನು ಹುಟ್ಟುಹಾಕಿದ್ದಲ್ಲ : ಎಂ.ಬಿ.ಪಾಟೀಲ್
ವಿಜಯಪುರ : ಲಿಂಗಾಯತ ಹೋರಾಟಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ.ಲಿಂಗಾಯತ ಧರ್ಮದ ಹೋರಾಟ ನಾನು ಹುಟ್ಟು ಹಾಕಿದ್ದಲ್ಲ ಎಂದು ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಎಂ ಬಿ ಪಾಟೀಲ್ ಮಾತನಾಡಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಸನ್ಮಾನಿಸಿದ್ದ ವೀರಶೈವ ಮಹಾಸಭೆ, ಪ್ರತ್ಯೇಕ ಧರ್ಮಕ್ಕೆ ಮನವಿ ಮಾಡಿತ್ತು.
ಆಗ ಸಿದ್ದರಾಮಯ್ಯನವರು ನಾಗಮೋಹನ ದಾಸ ಸಮಿತಿ ವರದಿ ಆಧರಿಸಿ, ಸಂಪುಟ ನೀಡಿದ ಸರ್ವಾನುಮತದ ಒಪ್ಪಿಗೆ ಪಡೆದು, ಕೇಂದ್ರಕ್ಕೆ ಒಪ್ಪಿಗೆಗೆ ಕಳಿಸಿದ್ದಾರೆ ಎಂದು ವಿವರಿಸಿದರು.
ಇನ್ನು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವೂ ನನ್ನಿಂದ ಆರಂಭಗೊಂಡಿಲ್ಲ. ವೀರಶೈವ ಮಹಾಸಭೆ ಆರಂಭಿಸಿದ್ದ ಹೋರಾಟವನ್ನು ನಾವು ಮುಂದುವರೆಸಿದ್ದೆ.
ಲಿಂಗಾಯತ ಸ್ವತಂತ್ರ ಧರ್ಮದಿಂದ ಕಾಂಗ್ರೆಸ್ ಗೆ ಹಿನ್ನೆಡೆ ಆಗಿಲ್ಲ. ಸಿದ್ದರಾಮಯ್ಯ ಅವರೇ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಲಿಂಗಾಯತ ಹೋರಾಟಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ.
ನಮ್ಮ ಸರ್ಕಾರದಲ್ಲಿ ಐದು ಮಂದಿ ಸಚಿವರ ಕಮಿಟಿ ರಚಿಸಿದಾಗ ನಾನು ಅದರಲ್ಲಿ ಇರಲಿಲ್ಲ. ಮುಂದೆ ಹುಬ್ಬಳ್ಳಿ, ಕಲಬುರಗಿ ಸೇರಿ ಇತರೆಡೆ ನಡೆದ ಸಭೆಗಳಲ್ಲಿ ನಾನು ಭಾಗವಹಿಸಿದೆ. ಹೀಗಾಗಿ ಲಿಂಗಾಯತ ಧರ್ಮದ ಹೋರಾಟ ನಾನು ಹುಟ್ಟುಹಾಕಿದ್ದಲ್ಲ ಎಂದು ಸ್ಪಷ್ಟಪಡಿಸಿದರು.