ಬೀದರ್: ಕರ್ನಾಟಕ ಬಸ್ ಗೆ ಮಹಾರಾಷ್ಟ್ರದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಅಲ್ಲಿ ಮರಾಠಾ ಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದು, ಪಾಪಿಗಳು ಸಂಬಂಧವೇ ಇಲ್ಲದ ಕರ್ನಾಟಕ ರಾಜ್ಯದ ಬಸ್ ಗೆ ಬೆಂಕಿ ಹಚ್ಚಿದ್ದಾರೆ.
ಮಹಾರಾಷ್ಟ್ರದ ಉಮ್ಮರ್ಗಾದ ತುರುರಿ ಬಳಿ ಬಸ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಆದರೆ, ಘಟನೆಯಲ್ಲಿ ಚಾಲಕ, ಕಂಡಕ್ಟರ್ ಸೇರಿದಂತೆ ಬಸ್ ನಲ್ಲಿದ್ದ 46 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಸ್ ಬೀದರ್ (Bidar) ಜಿಲ್ಲೆ ಭಾಲ್ಕಿ ತಾಲೂಕಿನ ಡಿಪೋಗೆ ಸೇರಿದ್ದು ಎನ್ನಲಾಗಿದೆ. ಭಾಲ್ಕಿಯಿಂದ ಪುಣೆಗೆ (Pune) ಈ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿಯೇ ದುಷ್ಕರ್ಮಿಗಳು ಬಸ್ ಗೆ ಬೆಂಕಿ ಹಚ್ಚಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು ಮಹಾರಾಷ್ಟ್ರಕ್ಕೆ ಬಸ್ ಸಂಚಾರ ರದ್ದು ಮಾಡಿದೆ.








